ಮೈಸೂರು: ಜೆಡಿಎಸ್ನಲ್ಲಿ ಹೈ ಕಮಾಂಡ್ ಇಲ್ಲ. ಎಲ್ಲರೂ ಹೈ ಕಮಾಂಡ್ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಹಕಾರಿ ಕ್ಷೇತ್ರದ ಚುನಾವಣೆಗಳಲ್ಲಿ ನಾನು ಎಂದೂ ಭಾಗವಹಿಸಿರಲಿಲ್ಲ. ನನ್ನ ಸಹೋದರ ಹೆಚ್.ಡಿ. ರೇವಣ್ಣ ಹೆಚ್ಚಾಗಿ ಭಾಗವಹಿಸುತ್ತಿದ್ದರು. ಆದರೆ, ಮೈಸೂರಿನ ಮೈಮೂಲ್ನಲ್ಲಿ ಇದೇ ತಿಂಗಳ 16 ರಂದು ನಡೆಯುವ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕು. ಆ ದೃಷ್ಟಿಯಿಂದ ನಾನೇ 2 ದಿನಗಳ ಕಾಲ ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.
ಇನ್ನೂ ನಿತ್ಯ ಪಕ್ಷವನ್ನು ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪಕ್ಷದ ಹೈ ಕಮಾಂಡ್ ಗಮನಿಸುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಹೈ ಕಮಾಂಡ್ ಇಲ್ಲ. ಎಲ್ಲರೂ ಹೈ ಕಮಾಂಡೇ ಎಂದು ವ್ಯಂಗ್ಯವಾಗಿ ಹೇಳಿದರು.
ಇದನ್ನೂ ಓದಿ: ಎಸ್ಐಟಿ ತನಿಖೆಯ ಬೆಳವಣಿಗೆ ನೋಡಿ ಎಫ್ಐಆರ್ ದಾಖಲು: ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವ ಸಿಡಿ ಪ್ರಕರಣವನ್ನು ಸದ್ಯದ ಮಟ್ಟಿಗೆ ಎಸ್ಐಟಿಗೆ ವಹಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಯಾವುದೇ ತನಿಖೆಗಳಾದರೂ ತಪ್ಪಿತಸ್ಥರಿಗೆ ಶಿಕ್ಷೆಯನ್ನು ವಿಧಿಸುವಲ್ಲಿ ವಿಫಲವಾಗಿವೆ. ಈ ಎಲ್ಲ ತನಿಖೆಗಳು ಬರಿ ನಾಮಕೇವಾಸ್ತೆಯಾಗಿದ್ದು, ಹಲವು ಪ್ರಕರಣಗಳಿಗೆ ಇಂದಿಗೂ ಸಹ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿದರು.