ಮೈಸೂರು: ಹನುಮ ಜಯಂತಿ ಆಚರಣೆ ಹಿನ್ನೆಲೆ ಇಂದಿನಿಂದ ಮೂರು ದಿನಗಳ ಕಾಲ ಹುಣಸೂರು ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಲಾಗಿದೆ. ಜತೆಗೆ ಒಂದು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹನುಮ ಜಯಂತಿ ಶೋಭಾಯಾತ್ರೆಯ ಸಾಗುವ ಮಾರ್ಗಗಳನ್ನು ಎಸ್ಪಿ ಆರ್. ಚೇತನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಪಥ ಸಂಚಲನ ಮಾಡಲಾಗಿದೆ. ಶಾಂತಿಯುತವಾಗಿ ಹನುಮ ಜಯಂತಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಶೋಭಾಯಾತ್ರೆ ಆರಂಭವಾಗಲಿದೆ. ಕಾನೂನು ಸುವ್ಯವಸ್ಥೆಗಾಗಿ 1,700 ಮಂದಿ ಪೊಲೀಸರು, 9 ಡಿಎಆರ್, 8 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ನಗರಸಭೆ ವತಿಯಿಂದ 70 ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಕಂಟ್ರೋಲ್ ರೂಂ ಮೂಲಕ ನಿಯಂತ್ರಣ ಮಾಡಲಾಗುತ್ತಿದೆ.
ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಜೆಎಲ್‌ಬಿ, ಬಜಾರ್ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟ ನಿಷೇಧಿಸಲಾಗಿದೆ. ಅನುಮತಿ ಪಡೆದ ವಾಹನಗಳಿಗೆ ಮಾತ್ರ ಮೆರವಣಿಗೆಗೆ ಅವಕಾಶ ನೀಡಲಾಗಿದೆ. ಅಲ್ಲದೇ ವಾಹನಗಳ ಮೇಲೆ ಹತ್ತುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಡಿಜೆ ಬಳಕೆಗೆ ಅವಕಾಶ ನಿರಾಕರಿಸಲಾಗಿದೆ. ಸಂಜೆ 5ರವರೆಗೆ ಮಾತ್ರ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗಿದೆ. ಮೆರವಣಿಗೆ ಸಾಗುವ ಎಲ್ಲಾ ಮಾರ್ಗಗಳ ಪರಿಶೀಲನೆ ಮಾಡಲಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 30 ಮಂದಿ ಆರೋಪಿತರ ಪಟ್ಟಿ ಸಿದ್ಧಪಡಿಸಿ ಅವರ ಚಲನವಲನದ ಮೇಲೆ ಒಬ್ಬರಿಗೆ ಒಬ್ಬ ಪೊಲೀಸರು ನಿಗಾ ವಹಿಸಿದ್ದಾರೆ. ನಗರ ಪ್ರವೇಶಿಸುವ 6 ಕಡೆ, ಜಿಲ್ಲೆಯ ಎರಡು ಕಡೆಯಲ್ಲಿ ಚೆಕ್‌ಪೋಸ್ಟ್ ಮಾಡಲಾಗಿದೆ.
ಸಾರ್ವಜನಿಕರು ಏನೇ ದೂರುಗಳಿದ್ದರೂ ಸಹಾಯ ವಾಣಿ 112ಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ನಗರಸಭೆಯ ಅನುಮತಿಯೊಂದಿಗೆ ನಿಗದಿತ ಸ್ಥಳದಲ್ಲಿ ಮಾತ್ರ ಬಾವುಟ, ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಹನುಮ ಜಯಂತಿ ಹಿನ್ನೆಲೆ ಮಾಲಾಧಾರಿಗಳಿಂದ ಸಿದ್ದರಬೆಟ್ಟಕ್ಕೆ ಪಾದಯಾತ್ರೆ