ಮೈಸೂರು: ಉನ್ನತ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಮಗ್ರ ತನಿಖೆ ಮಾಡಬೇಕು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸಿಎಂಗೆ ಆಗ್ರಹಿಸಿದ್ದಾರೆ.
ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್, ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷಾತೀತವಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಇನ್ನೂ ಬಾದಾಮಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳು ಬಾದಾಮಿ ಹಾಗೂ ಬೆಂಗಳೂರಿನಲ್ಲಿ ಕಾಣಿಸುತ್ತಿಲ್ಲ, ಎಲ್ಲಿದ್ದಾರೋ ಗೊತ್ತಿಲ್ಲ, ಇಂತಹ ಸಂದರ್ಭದಲ್ಲಿ ಅವರು ಜನರಿಗೆ ಸಾಂತ್ವನ ಹೇಳಬೇಕು ಎಂದರು.
ಇನ್ನೂ ರಾಜ್ಯದಲ್ಲಿ ಹಿಂದಿನ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಆಗಿದ್ದು, ಸಿಎಂ ಕಚೇರಿಯಿಂದಲೇ ನನ್ನ ಹಾಗೂ ಇತರ ಅನರ್ಹ ಶಾಸಕರ ಫೋನ್ ಕದ್ದಾಲಿಕೆ ಆಗಿದೆ. ಈ ಸಂದರ್ಭದಲ್ಲಿ ನನಗೆ ರಾಜೀನಾಮೆ ಹಿಂಪಡೆಯುವಂತೆ ಒತ್ತಡ ಸಹ ಇತ್ತು ಎಂದ ವಿಶ್ವನಾಥ್. ಇತ್ತಿಚೆಗೆ ರಾಜ್ಯದಲ್ಲಿ ಇರುವ ಉನ್ನತ ಐಪಿಎಸ್ ಅಧಿಕಾರಿಗಳ ಟೆಲಿಫೋನ್ ಕದ್ದಾಲಿಕೆ ಕೂಡ ಆಗಿದ್ದು, ಇದನ್ನು ಮುಖ್ಯಮಂತ್ರಿಗಳು ಸಂಪೂರ್ಣ ತನಿಖೆ ಮಾಡಿಸಬೇಕು ಎಂದರು. ಅಲ್ಲದೇ, ನನ್ನ ವೈಯಕ್ತಿಕವಾಗಿ ತೇಜೋವಧೆ ಮಾಡಿರುವ ಆಡಿಯೋ ಸಹ ಬಹಿರಂಗವಾಗಿದ್ದು, ಈ ಬಗ್ಗೆ ಸಂಪೂರ್ಣ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದ ವಿಶ್ವನಾಥ್, ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಗೃಹ ಸಚಿವರ ಫೋನ್ ಸೇರಿದಂತೆ ಹಲವಾರು ಪೋನ್ ಗಳು ಕದ್ದಾಲಿಕೆಯಾಗಿದೆ ಎಂದು ಆರೋಪಿಸಿದರು.
ಇನ್ನು ಜಿ.ಟಿ.ದೇವೇಗೌಡ ಸಿಎಂ ಭೇಟಿಯಾಗಿರುವುದು ರಾಜಕೀಯ ವಿಚಾರಕ್ಕೆ ಅಲ್ಲ , ಸಾರ್ವಜನಿಕ ಕೆಲಸಕ್ಕಾಗಿ ಆದರೂ ಶಾಸಕ ಜಿ.ಟಿ.ದೇವೇಗೌಡ ಬಿಜೆಪಿಯ ಹಳೆಯ ಗಿರಾಕಿ ಅಲ್ಲವೇ? ಎಂದು ಪ್ರಶ್ನೆ ಮಾಡಿದ ವಿಶ್ವನಾಥ್, ಈ ಬಾರಿ ದಸರಾ ವೈಭವದಿಂದ ನಡೆಯಬೇಕು ಎಂದು ತಿಳಿಸಿದ ಅವರು, ಅನರ್ಹತೆಗೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದರು.