ಮೈಸೂರು: ಸುಪ್ರೀಂಕೋರ್ಟ್ ನಲ್ಲಿ ನಾಳೆ ಪ್ರಕರಣದ ವಿಚಾರಣೆ ಇದೆ. ನಮಗೆ ನ್ಯಾಯ ಸಿಗುವ ಭರವಸೆ ಇರುವುದರಿಂದ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲವೆಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಶನಿವಾರ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಯ ದಿನಾಂಕ ಪ್ರಕಟಿಸಿರುವ ಹಿನ್ನೆಲೆ, ತುರ್ತು ಪತ್ರಿಕಾಗೋಷ್ಟಿ ನಡೆಸಿದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು, ನಮ್ಮ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ಮುಂದಿದೆ. ಈ ನಡುವೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣಾ ದಿನಾಂಕ ನಿಗದಿ ಮಾಡಿದೆ. ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಸ್ಪೀಕರ್ ಆದೇಶ ಮತ್ತು ಅವರ ನಡವಳಿಕೆ ಬಗ್ಗೆ ನಮ್ಮ ನ್ಯಾಯವಾದಿಗಳು ಸುಪ್ರೀಂಕೋರ್ಟ್ಗೆ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಅಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಅಲ್ಲದೆ ನಾವ್ಯಾರೂ ಪದವಿಗಾಗಿ ಅಥವಾ ದುಡ್ಡಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಮಾಧ್ಯಮಗಳು ಅನರ್ಹರು ಅಥವಾ ಇತರ ಪದಗಳನ್ನು ಬಳಸಬೇಡಿ ಎಂದು ಹೆಚ್ ವಿಶ್ವನಾಥ್ ಮನವಿ ಮಾಡಿದರು.
ಕುಮಾರಸ್ವಾಮಿ, ಸಿದ್ದರಾಮಯ್ಯ, ಜಿ. ಟಿ. ದೇವೇಗೌಡ ಎಲ್ಲರೂ ಒಳ್ಳೆಯ ನಾಯಕರೇ. ಕುಮಾರಸ್ವಾಮಿ ಈಗಲೂ ನಮ್ಮ ನಾಯಕರು. ಅವರು ಬೇರೆಯವರ ಮಾತು ಕೇಳಿ ಏಕಾಂಗಿ ಆಗುತ್ತಿದ್ದಾರೆ ಎಂದರು. ಅಲ್ಲದೆ, ಶಾಸಕ ಸಾ.ರಾ. ಮಹೇಶ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ವಿಶ್ವನಾಥ್ ಅವರು, ನಾವು 17 ಜನ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಗೆ ಚುನಾವಣೆ ಘೋಷಣೆಗೂ ಮುನ್ನವೇ ಹೋಗಿದ್ದೇವೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ. ನಾವು ಹಣ ತೆಗೆದುಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ ಎಂಬುದನ್ನು ನಿರೂಪಿಸುವಂತೆ ಸಾ.ರಾ. ಮಹೇಶ್ ಗೆ ಬಹಿರಂಗ ಸವಾಲನ್ನೂ ಹಾಕಿದ್ದಾರೆ.