ಮೈಸೂರು: ನಾಡಹಬ್ಬ ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ದಸರಾ ಆನೆ ಬಲರಾಮನಿಗೆ ಗುಂಡೇಟು ಹೊಡೆದ ಜಮೀನಿನ ಮಾಲೀಕ ಸುರೇಶ್ ಎಂಬಾತನನ್ನು ಅರಣ್ಯ ಇಲಾಖೆ ಬಂಧಿಸಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದಲ್ಲಿರುವ ಬಲರಾಮ ಸಮೀಪದ ಜಮೀನಿಗೆ ಹೋಗಿದ್ದ. ಆ ವೇಳೆ ಸಿಟ್ಟಿಗೆದ್ದ ಮಾಲೀಕ ಸುರೇಶ್ ಗುಂಡು ಹಾರಿಸಿದ ಪರಿಣಾಮ ಗುಂಡು ಶರೀರದ 32 ಕಡೆ ಹೊಕ್ಕಿತ್ತು. ಆನೆಗೆ ಗುಂಡು ತಾಗಿರುವ ಬಗ್ಗೆ ಮಾವುತ, ಅರಣ್ಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದ. ಆಗ ಸ್ಥಳಕ್ಕೆ ತೆರಳಿ ಆರೋಪಿ ಸುರೇಶ್ ಅವರನ್ನು ಶುಕ್ರವಾರ ಬಂಧಿಸಿದ್ದಾರೆ.
ವನ್ಯ ಜೀವಿ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ಸಿಂಗಲ್ ಬ್ಯಾರಲ್ ಬಂದೂಕು, ಕಾರ್ಟ್ರಿಜ್ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಬಲರಾಮನಿಗೆ ಚಿಕಿತ್ಸೆ ನೀಡುತ್ತಿದ್ದು, ಸದ್ಯ ಆನೆ ಚೇತರಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತಿ.ನರಸೀಪುರ: ಕಬ್ಬು ಕಟಾವು ವೇಳೆ ಮೂರು ಚಿರತೆ ಮರಿಗಳು ಪತ್ತೆ