ಮೈಸೂರು: ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನನ್ನ ಮಾತನ್ನು ವರಿಷ್ಠರು ಪರಿಗಣಿಸುವುದಿಲ್ಲವೆಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬೇಸರ ಹೊರಹಾಕಿದ್ದಾರೆ.
ವಿಜಯನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಟಿಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಥವಾ ನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮತದಾರನಾಗಿದ್ದಾಲೂ ಅಷ್ಟೇ. ಪಕ್ಷದಲ್ಲಿ ನನ್ನ ಮಾತು ನಡೆಯುವುದಿಲ್ಲ. ಕಳೆದ ಬಾರಿ ಚಲುವೇಗೌಡರನ್ನ ಮೇಯರ್ ಮಾಡಬೇಕು ಎಂದುಕೊಂಡಿದ್ದೆ, ಆದರೆ ಆಗಲಿಲ್ಲ. ಕುಮಾರಸ್ವಾಮಿಯವರು ಸಾ.ರಾ.ಮಹೇಶ್ ಮಾತಿಗೆ ಮನ್ನಣೆ ಕೊಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು.
ಮೇಯರ್ -ಉಪಮೇಯರ್ ಗೆ ಮೀಸಲಾತಿಯನ್ನು ಗುರುವಾರವಷ್ಟೇ ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಕುರಿತಾಗಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಈ ಚುನಾವಣೆಯಲ್ಲಿ ತಟಸ್ಥನಾಗಿರುವುದಿಲ್ಲ ಎಂದರು.
ಇನ್ನು, ಪೌರತ್ವ ಕಾಯ್ದೆ ಬಗೆಗಿನ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರ ಆಸ್ತಿಗೆ ಹಾನಿ ಮಾಡುವುದು ತಪ್ಪು.ಸರ್ಕಾರ ಜನರ ಪ್ರತಿಭಟನೆ ಹಕ್ಕನ್ನು ಕಸಿದುಕೊಳ್ಳಬಾರದು, ಇದರ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.