ಮೈಸೂರು : "ಮಹಿಳೆಯರ ಆರ್ಥಿಕ ಹೊರೆ ಇಳಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಕರ್ನಾಟಕದಲ್ಲಿ ಜಾರಿಗೊಳಿಸಿರುವ ಈ ಯೋಜನೆಗಳನ್ನು ಇಡೀ ದೇಶಕ್ಕೆ ವಿಸ್ತರಿಸುವ ಚಿಂತನೆ ಇದೆ. ಇವು ಇಡೀ ದೇಶಕ್ಕೆ ದಿಕ್ಸೂಚಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದಿದ್ದೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಹೆಚ್ಚು ಅನುಕೂಲವಾಗಿದೆ. ಅನ್ನಭಾಗ್ಯ, ಉಚಿತ 200 ಯುನಿಟ್ ವಿದ್ಯುತ್ ಹಾಗೂ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸದ್ಯ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನ್ನು ಜಾರಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಯುವನಿಧಿ ಜಾರಿಗೊಳಿಸುತ್ತೇವೆ" ಎಂದರು.
"ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಕಷ್ಟವಾಗಿದೆ. ಗ್ಯಾರಂಟಿ ಯೋಜನೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಗೃಹಲಕ್ಷ್ಮಿ ಯೋಜನೆ ದೇಶದಲ್ಲೇ ದೊಡ್ಡ ಯೋಜನೆಯಾಗಿದ್ದು, ವಿದೇಶದಲ್ಲೂ ಗಮನ ಸೆಳೆದಿದೆ" ಎಂದು ರಾಹುಲ್ ಗಾಂಧಿ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಕರ್ನಾಟಕದಲ್ಲಿ 1 ಕೋಟಿ 24 ಲಕ್ಷ ಜನ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದು, ಇದರಲ್ಲಿ 1 ಕೋಟಿ 11 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇವರ ಖಾತೆಗೆ ಇಂದು 2000 ಖಾತೆಗೆ ಜಮಾ ಆಗುತ್ತಿದೆ. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 48.5 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ನೀಡುವುದಾಗಿ ಭರವಸೆ ನೀಡಿದ್ದು, ಅಕ್ಕಿ ಸಿಗುವವರೆಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿಗೆ ಹಣ ನೀಡಲಾಗುತ್ತಿದೆ. ಗೃಹ ಜ್ಯೋತಿ ಯೋಜನೆಯಡಿ 1 ಕೋಟಿ 56 ಲಕ್ಷ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
56 ಸಾವಿರ ಕೋಟಿ ರೂ ವೆಚ್ಚ- ಸಿಎಂ ಸಿದ್ದರಾಮಯ್ಯ: 5ನೇ ಯೋಜನೆ ಯುವನಿಧಿಯನ್ನು ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಜಾರಿಗೆ ತರುತ್ತೇವೆ. ಐದು ಯೋಜನೆಗಳಿಗೆ ಒಟ್ಟು 56 ಸಾವಿರ ಕೋಟಿ ಹಣ ವೆಚ್ಚವಾಗುತ್ತದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿಗಳಿಂದ ಬಿಜೆಪಿಗೆ ತಿರುಗೇಟು-ಮಲ್ಲಿಕಾರ್ಜುನ ಖರ್ಗೆ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ನಾವು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದಾಗ ಸ್ವತಃ ಪ್ರಧಾನಿ ಮೋದಿ ಇದು ಸಾಧ್ಯವಾಗುವುದಿಲ್ಲ ಎಂದು ಗೇಲಿ ಮಾಡಿದ್ದರು. ಉಚಿತ ಯೋಜನೆಗಳಿಂದ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂದಿದ್ದರು. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬಿಜೆಪಿ ನಾಯಕರ ಟೀಕೆಗಳಿಗೆ ತಕ್ಕ ಉತ್ತರ ನೀಡಿದೆ. ನಾವು ಜಾರಿಗೊಳಿಸಿದ್ದ ಹಳೆಯ ಯೋಜನೆಗಳನ್ನು ಬೇರೆ ರೂಪ ಬಣ್ಣ ಕೊಟ್ಟು ಬಿಜೆಪಿಯವರು ಜಾರಿಗೆ ತಂದಿದ್ದಾರೆ" ಎಂದರು.
"ಮೋದಿ ಸರ್‌ನೇಮ್ ಪ್ರಸ್ತಾಪಿಸಿದ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಲಾಯಿತು. ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಆದರೆ ನ್ಯಾಯಾಲಯದಿಂದ ನ್ಯಾಯ ಸಿಕ್ಕಿತು. ಸಂವಿಧಾನದ ಆಶೋತ್ತರಗಳನ್ನು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಗುಲಾಮಗಿರಿಯಲ್ಲಿ ಬದುಕಬೇಕಾಗುತ್ತದೆ. ದೇಶ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ" ಎಂದು ಹೇಳಿದರು.
ದೇಶದಲ್ಲಿ ಬದಲಾವಣೆ ಪರ್ವ ಆರಂಭ- ಡಿಸಿಎಂ ಡಿಕೆಶಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, "ಇಡೀ ದೇಶದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಇಂದಿರಾ ಗಾಂಧಿಯವರ ಕಾಲದ ಗತವೈಭವ ಮರುಕಳಿಸುತ್ತಿದೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿ ಯೋಜನೆ ಅನುಷ್ಠಾನದ ಭರವಸೆ ನೀಡಿದ್ದೆವು. ಇದೀಗ ಸರ್ಕಾರ ಬಂದು ನೂರು ದಿನ ಪೂರೈಸಿದ್ದೇವೆ. ಇಂದು ನಾಲ್ಕನೇ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದ್ದೇವೆ" ಎಂದರು.
10 ಜನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದಿರುವ ಸರ್ಕಾರದ 100 ದಿನಗಳ ಸಾಧನೆ ಕಿರುಹೊತ್ತಿಗೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಗೃಹಮಂತ್ರಿ ಜಿ.ಪರಮೇಶ್ವರ್, ಸಣ್ಣ ನೀರಾವರಿ ಇಲಾಖೆಯ ಸಚಿವ ಬೋಸರಾಜು, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೃಷಿ ಸಚಿವ ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಪಶು ಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಾಸಕರಾದ ಹರೀಶ್ ಗೌಡ, ಡಿ.ರವಿಶಂಕರ್, ಶಿವಲಿಂಗೇಗೌಡ, ಅನಿಲ್ ಕುಮಾರ್ ಸಿ, ತನ್ವೀರ್ ಸೇಠ್, ಶರತ್ ಬಚ್ಚೇಗೌಡ, ನರೇಂದ್ರ ಸ್ವಾಮಿ, ದರ್ಶನ್ ಧ್ರುವ ನಾರಾಯಣ್, ಮಂಥರ್ ಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್, ಪ್ರಕಾಶ್ ಹುಕ್ಕೇರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಗೃಹಲಕ್ಷ್ಮಿಗೆ ನಮ್ಮ ವಿರೋಧವಿಲ್ಲ, ಉಳಿದ ಕಾರ್ಯಕ್ರಮಗಳ ಬಗ್ಗೆಯೂ ಸರ್ಕಾರದ ಗಮನವಿರಲಿ: ಎನ್.ರವಿಕುಮಾರ್