ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದ್ದ ವೇಳೆ ವಧು-ವರ ಸಾವನ್ನಪ್ಪಿರುವ ಘಟನೆ ತಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಕಾವೇರಿ ಸಂಗಮದಲ್ಲಿ ನಡೆದಿದೆ.
ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ತೆಪ್ಪ ಮುಳುಗಿ ವಧು-ವರ ಅಸುನೀಗಿದ್ದಾರೆ. ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ವಧು ಶಶಿಕಲಾ, ವರ ಚಂದ್ರು ಮೃತ ಪಟ್ಟಿದ್ದಾರೆ. ತಲಕಾಡಿನ ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಫೋಟೋ ಶೂಟ್ ಮಾಡುತ್ತಿದ್ದಾಗ ಆಯತಪ್ಪಿ ಶಶಿಕಲಾ ನದಿಗೆ ಬಿದ್ದಿದ್ದಾರೆ. ಶಶಿಕಲಾಳನ್ನು ಹಿಡಿಯಲು ಹೋಗಿ ಚಂದ್ರು ಸಹ ನದಿಗೆ ಬಿದ್ದಿದ್ದಾರೆ. ಈಜು ಬಾರದ ಹಿನ್ನೆಲೆಯಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ಮೃತ ಜೋಡಿಗಳ ಶವವನ್ನು ಮೇಲೆತ್ತಲಾಗಿದೆ. ನವೆಂಬರ್ 22 ರಂದು ಮದುವೆಯಾಗಬೇಕಿದ್ದ ಚಂದ್ರು ಶಶಿಕಲಾ ಮೃತದೇಹಗಳನ್ನು ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.