ಮೈಸೂರು : ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗಾಗಿ ಹೊಸದಾಗಿ 'ಯೋಗಲಕ್ಷ್ಮಿ' ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇಂದು ಯೋಜನೆ ಜಾರಿ ಮಾಡಲಾಯಿತು.
ನಗರ ಪಾಲಿಕೆಯ ನವೀಕೃತ ಸಭಾಂಗಣದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಯೋಗಲಕ್ಷ್ಮಿ ಯೋಜನೆ ಜಾರಿಗೊಳಿಸಿದರು. ಈ ಯೋಜನೆ ಅಡಿ ಮಗುವಿಗೆ 18 ವರ್ಷ ತುಂಬುವವರೆಗೂ 25 ಸಾವಿರ ರೂ.ಗಳನ್ನು ಬ್ಯಾಂಕ್ನಲ್ಲಿ ಇಟ್ಟಿರುವ ಬಾಂಡ್ ವಿತರಣೆ ಮಾಡಲಾಗುವುದು.
ಈ ಯೋಜನೆಗೆ 2019-20ರ ಸಾಲಿನ ಆಯವ್ಯಯದ ಸಾಮಾನ್ಯ ನಿಧಿಯಿಂದ ಹಣ ಮೀಸಲಿಡಲಾಗಿದ್ದು, 01/04/2019ರ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಲಭಿಸಲಿದೆ. ಈ ಯೋಜನೆಗಾಗಿ ನಗರ ಪಾಲಿಕೆ ವಲಯ ಕಚೇರಿ ಜನನ ಮತ್ತು ಮರಣ ವಿಭಾಗದಿಂದ ಅರ್ಜಿಗಳನ್ನು ಪಡೆಯಬಹುದಾಗಿದ್ದು, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಈ ವೇಳೆ ನೀರಿನ ಶುಲ್ಕ ಪಾವತಿಯನ್ನು ಆನ್ಲೈನ್ ಮೂಲಕ ಪಾವತಿಸಲು ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲಾಯಿತು. ಇ-ಪೇಮೆಂಟ್ ಅನ್ನು ಎನ್ಪಿಸಿಐ(NPCI) ಸಂಸ್ಥೆಯ ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ ಮೂಲಕ ಆನ್ಲೈನ್ ವ್ಯವಸ್ಥೆ ಜಾರಿ ಮಾಡಲಾಗಿಲಾಗಿದ್ದು, ಗ್ರಾಹಕರಿಗೆ ಎಸ್ಎಂಎಸ್ ಮೂಲಕ ಅಲರ್ಟ್ ಮೆಸೇಜ್ ಹೋಗಲಿದೆ.