ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾಡಿನ ಜನತೆಗೆ ಆಯುಧಪೂಜೆ ಹಾಗೂ ವಿಜಯದಶಮಿಗೆ ಸಿಎಂ ಬಸವರಾಜ ಬೊಮ್ಮಾಯಿ ಶುಭಾಶಯ ತಿಳಿಸಿದರು.
ನಾಳೆ ದಸರಾ ಮಹೋತ್ಸವ ವಿಜಯದಶಮಿಯ ಜಂಬೂಸವಾರಿಯಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಸಿಎಂ ಇಂದು ಆಯುಧಪೂಜೆ ನಾಳೆ ವಿಜಯದಶಮಿ ಇರುವುದರಿಂದ ಈ ಎರಡು ದಿನ ರಾಜಕೀಯ ಮಾತನಾಡುವುದಿಲ್ಲ ಎಂದರು. ಸಂಪ್ರದಾಯದಂತೆ ರಾಜ್ಯಪಾಲರು ದಸರಾ ಮಹೋತ್ಸವದ ಪಂಜಿನ ಕವಾಯತಿನಲ್ಲಿ ಭಾಗವಹಿಸಬೇಕಿತ್ತು. ಆದರೆ, ಅವರಿಗೆ ಕೋವಿಡ್ ಸೋಂಕಾಗಿರುವ ಹಿನ್ನೆಲೆಯಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.
ನಾಳೆ ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡುವ ಸಿಎಂ ಬೊಮ್ಮಾಯಿ, ಮಧ್ಯಾಹ್ನ ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಾಲಯದ ಮುಂಭಾಗ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಜಂಬೂ ಸವಾರಿಯ ಮೆರವಣಿಗೆಗೆ ಚಾಲನೆ ನೀಡುವರು. ಬಳಿಕ ಸಂಜೆ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವರು. ನಂತರ ಬನ್ನಿ ಮಂಟಪ ಮೈದಾನದ ಪಂಜಿನ ಕವಾಯತಿನಲ್ಲಿ ಭಾಗವಹಿಸಿ ರಾತ್ರಿ 10 ಗಂಟೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆಗುವರು.
ಇದನ್ನೂ ಓದಿ: ಅರಮನೆಯಲ್ಲಿ ಆಯುಧ ಪೂಜೆ.. ಪಟ್ಟದ ಆನೆ ಕುದುರೆ ಪಲ್ಲಕ್ಕಿ ಸೇರಿ ಐಷಾರಾಮಿ ಕಾರುಗಳಿಗೆ ಪೂಜೆ