ಮೈಸೂರು: ನಂಜನಗೂಡು ಪಂಚ ರಥೋತ್ಸವದಲ್ಲಿ ವಿಘ್ನ ಉಂಟಾಗಿದ್ದು, ತೇರು ಎಳೆಯುವಾಗ ಪಾರ್ವತಿ ದೇವಿಯ ರಥದ ತೇರಿನ ಚಕ್ರ ಪುಡಿಯಾದ ಘಟನೆ ನಡೆದಿದೆ.
ರಥದ ತೇರಿನ ಚಕ್ರ ಪುಡಿಯಾದ ಹಿನ್ನೆಲೆ ಅಪಶಕುನ ಎಂದು ಭಕ್ತಾದಿಗಳಲ್ಲಿ ಆತಂಕ ಎದುರಾಗಿದೆ. ಪಾರ್ವತಿ ಅಮ್ಮನ ರಥದ ಬಲ ಭಾಗದ ಮುಂಬದಿ ಚಕ್ರ ಪುಡಿಯಾಗಿ ಮುಂದೆ ಎಳೆಯಲಾರದ ಸ್ಥಿತಿ ತಲುಪಿತು. ಆದರೆ ಭಕ್ತರು ಅದೇ ರಥವನ್ನೇ ಎಳೆಯಲು ಯತ್ನಿಸಿದರು. ಆದ್ರೆ ಅದು ಸಾಧ್ಯವಾಗದ ಹಿನ್ನೆಲೆ ಪ್ರದಕ್ಷಣೆ ಮುಗಿಯುವ ಮುನ್ನವೇ ತೇರಿನಿಂದ ಅಮ್ಮನವರ ವಿಗ್ರಹವನ್ನು ಅರ್ಚಕರು ಇಳಿಸಿದರು.
ಅರ್ಚಕರು ತಾಯಿಯ ವಿಗ್ರಹವನ್ನು ಲಾಲ್ಬಾಗ್ಗೆ ತಂದು ಅದರಲ್ಲಿ ತಾಯಿಯ ವಿಗ್ರಹ ಸ್ಥಾಪನೆ ಮಾಡಿ ಗರ್ಭಗುಡಿಯಲ್ಲಿಟ್ಟು ಪೂಜೆ ಮಾಡಿದರು.
ಮೈಸೂರು ಜಿಲ್ಲಾಧಿಕಾರಿ, ಕೊರೊನಾ ಎರಡನೇ ಅಲೆ ಕಾರಣಕ್ಕೆ ಗೌತಮ ಪಂಚ ಮಹಾರಥೋತ್ಸವಕ್ಕೆ ಅನುಮತಿ ನಿರಾಕರಣೆ ಮಾಡಿ ಆದೇಶ ಹೊರಡಿಸಿದ್ದರು. ಈ ಬಾರಿ ನಂಜನಗೂಡು ದೊಡ್ಡ ರಥೋತ್ಸವದಲ್ಲಿ ಕೇವಲ ಪೂಜಾ ಕೈಂಕರ್ಯಗಳಿಗೆ ಮಾತ್ರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವಕಾಶ ನೀಡಿದ್ದರು.
ಮಾ. 19ರಿಂದ ಮಾ. 30ರವರೆಗೆ ಧಾರ್ಮಿಕ ಪೂಜೆ ಮಾಡಿ, ಸಾಂಪ್ರದಾಯಿಕವಾಗಿ ಚಿಕ್ಕ ತೇರು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಷರತ್ತುಗೊಳಪಡಿಸಿ ಸಾಂಕೇತಿಕ ರಥೋತ್ಸವಕ್ಕೆ ಸಮ್ಮತಿ ನೀಡಿದ ಜಿಲ್ಲಾಡಳಿತ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ, ಶಿಷ್ಟಾಚಾರದ ಪ್ರಕಾರ ಗಣ್ಯರು, ಅಧಿಕಾರಿಗಳು, ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹೊರ ರಾಜ್ಯ, ಹೊರ ಜಿಲ್ಲೆ ಹಾಗೂ ಹೊರ ತಾಲೂಕಿನ ಭಕ್ತಾದಿಗಳಿಗೆ ಪಂಚ ರಥೋತ್ಸವಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.