ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ 7ನೇ ಬಾರಿಗೆ ಮಾಗಿ ಮಾಸದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಅರಮನೆಯ ವರಾಹ ದ್ವಾರಕ್ಕೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ಡಿಸೆಂಬರ್ 24 ರಿಂದ ಜನವರಿ 2 ರ ವರೆಗೆ 10 ದಿನಗಳ ಕಾಲ ಪ್ರದರ್ಶನ ಇರಲಿದೆ.
ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖವಾಗಿ 55 ಅಡಿ ಉದ್ದ, 12 ಅಡಿ ಅಗಲ, 28 ಅಡಿ ಎತ್ತರದ ಹೂವಿನಿಂದಲೇ ಮಾಡಿರುವ ವಾರಾಣಸಿಯ ಕಾಶಿ ವಿಶ್ವನಾಥ ಮಂದಿರ, ನಮೀಬಿಯಾದಿಂದ ಭಾರತಕ್ಕೆ ಬಂದ ಚೀತಾಗಳ ಮಾದರಿ, ಜಂಬೂ ಸವಾರಿಗೆ ಆಗಮಿಸಿದ ಗಜಪಡೆಯಲ್ಲಿ ಬಂದ ಲಕ್ಷ್ಮಿ ಆನೆ ಗಂಡು ಮರಿಗೆ ಅರಮನೆಯಲ್ಲೇ ಜನ್ಮ ನೀಡಿದ್ದು, ಅದಕ್ಕೆ ದತ್ತಾತ್ರೇಯ ಎಂದು ಹೆಸರು ನಾಮಕರಣ ಮಾಡಿದ್ದು, ವಂದೇ ಭಾರತ್ ರೈಲು ಮಾದರಿ, ಇತ್ತೀಚೆಗೆ ನಿಧನವಾದ ಗೋಪಾಲಸ್ವಾಮಿ ಆನೆಯ ಮಾದರಿ ಸೇರಿದಂತೆ ಪ್ರಮುಖ ಮಾದರಿಗಳನ್ನು ಪುಷ್ಪಗಳಲ್ಲೇ ನಿರ್ಮಾಣ ಮಾಡಲಾಗಿದೆ.
4 ಲಕ್ಷಕ್ಕೂ ಹೆಚ್ಚು ವಿವಿಧ ಹೂಗಳ ಬಳಕೆ: ಫಲಪುಷ್ಪ ಪ್ರದರ್ಶನದಲ್ಲಿ 25 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಹೂ ಕುಂಡಗಳು, ಬೋನ್ಸಾಯ್ ಗಿಡಗಳು, 32 ಜಾತಿಯ ಹೂ ಗಿಡಗಳ ಪ್ರದರ್ಶನ, 4 ಲಕ್ಷಕ್ಕೂ ಹೆಚ್ಚು ಹೂಗಳಿಂದ ವಿವಿಧ ಮಾದರಿಯ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಅರಮನೆ ತೋಟಗಾರಿಕಾ ಗಿಡಗಳನ್ನು ನೋಡಿಕೊಳ್ಳುತ್ತಿರುವ ಉಸ್ತುವಾರಿ ಅಧಿಕಾರಿ ರಾಮಕೃಷ್ಣ ಮಾಹಿತಿ ನೀಡಿದರು.
ಇದನ್ನೂ ಓದಿ: ಸೆ.26 ರಿಂದ ಅ.5ರ ವರೆಗೆ ಫಲಪುಷ್ಪ ಪ್ರದರ್ಶನ: ಇಲ್ಲೂ ರಾರಾಜಿಸಲಿದ್ದಾರೆ ಪವರ್ ಸ್ಟಾರ್