ಮೈಸೂರು : ಮೈಸೂರಿನ ಭೂ ಅಕ್ರಮಗಳ ತನಿಖೆ ನಡೆಸಲು ನಾಲ್ಕು ತಿಂಗಳು ಕಾಲಾವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಜಯಪುರ ಹೋಬಳಿಯ ಯಡಹಳ್ಳಿ ಸರ್ವೇ ನಂ.69,72,72/1,2 ಹಾಗೂ 71/1, ದಟ್ಟಗಳ್ಳಿ ಗ್ರಾಮದ ಸ.ನಂ.130/3ರಲ್ಲಿ ಸೇರಿರುವ ಸ.ನಂ.98,131,132, ಲಿಂಗಾಂಬುಧಿ ಸ.ನಂ.123 ಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಜಮೀನಿನಲ್ಲಿ ಒತ್ತುವರಿಯಾಗಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿತ್ತು.
ಕಂದಾಯ ಇಲಾಖೆಯು ತನಿಖೆ ನಡೆಸಲು ತುಮಕೂರು, ಮಂಡ್ಯ ಹಾಗೂ ದಾವಣಗೆರೆಯ ಭೂ ದಾಖಲೆಗಳ ಉಪನಿರ್ದೇಶಕರ ತಂಡ ರಚನೆ ಮಾಡಿ ತನಿಖೆ ನಡೆಸಿ ವರದಿ ನೀಡುವಂತೆ ಆಗಸ್ಟ್ 30ರಂದು ಆದೇಶ ಹೊರಡಿಸಿತು. ಆದರೆ, ಶಾಸಕ ಸಾ ರಾ ಮಹೇಶ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸರ್ಕಾರಕ್ಕೆ ಪತ್ರ ಬರೆದಿದ್ದರು.
ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ಮಂಡ್ಯ,ತುಮಕೂರು ಹಾಗೂ ದಾವಣಗೆರೆಯ ಭೂ ದಾಖಲೆಗಳ ಉಪನಿರ್ದೇಶಕ ತಂಡ ಕೈಬಿಟ್ಟು, ಅಕ್ರಮದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರ ಹೆಗಲಿಗೆ ಹಾಕಿತು.
ಅಕ್ರಮ ಒತ್ತುವರಿ ಬಗ್ಗೆ ತನಿಖೆ ನಡೆಸಲು ತಂಡ ರಚನೆ ಮಾಡಿರುವ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರು, ನಾಡಹಬ್ಬ ದಸರಾ ಆಚರಣೆ ಪೂರ್ವಸಿದ್ಧತೆ ಕಾರ್ಯನಿರ್ವಹಣೆ ಹಾಗೂ ಕೋವಿಡ್-19 ಪರಿಸ್ಥಿತಿ ನಿರ್ವಹಣೆ ಮಾಡುವ ಬಗ್ಗೆ ಖುದ್ದು ತುರ್ತು ಗಮನಿಸಬೇಕಾಗಿರುವುದರಿಂದ, ಸರ್ಕಾರಿ ಜಮೀನುಗಳ ಒತ್ತುವರಿ ಬಗ್ಗೆ ಪೂರ್ಣ ರೀತಿ ತನಿಖೆ ನಡೆಸಲು ನಾಲ್ಕು ತಿಂಗಳ ಕಾಲಾವಕಾಶ ನೀಡಬೇಕೆಂದು ಸರ್ಕಾರಕ್ಕೆ ಕೋರಿದ್ದಾರೆ.