ಮೈಸೂರು: ಫ್ರಿ ಕಾಶ್ಮೀರ ಪ್ರಕರಣದ ಯುವತಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಸಿ.ಎಸ್.ದ್ವಾರಕನಾಥ್ ಅವರು ವಕೀಲರಿಗೆ ಅಭಿನಂದನೆ ಸಲ್ಲಿಸಿದರು.
ಮೈಸೂರಿನ ನಳಿನಿ ಕೇಸ್ ನಲ್ಲಿ ಜಾಮೀನು ಸಿಕ್ಕಿದೆ. ಈ ಕೇಸಿನಲ್ಲಿ ನನ್ನೊಂದಿಗೆ ತೊಡಗಿಸಿಕೊಂಡ ಎಲ್ಲಾ ಜನಪರ ವಕೀಲರಿಗೂ, ವಾದ ಮಂಡಿಸಿದ ವಕೀಲ ಜಗದೀಶ್ ರಿಗೂ ಕೃತಜ್ಞತೆಗಳು' ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಾನಸಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆ ವೇಳೆ 'ಫ್ರಿ ಕಾಶ್ಮೀರ ' ಬೋರ್ಡ್ ಹಿಡಿದ ನಳಿನಿ ಬಾಲಕುಮಾರ್ ಪರವಾಗಿ ಯಾರು ವಕಾಲತ್ತು ವಹಿಸಬಾರದು ಎಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಿ.ಎಸ್.ದ್ವಾರಕನಾಥ್ ಅವರು, ನಮ್ಮ ತಂಡ ಯುವತಿಯ ಪರವಾಗಿ ವಾದ ಮಂಡಿಸಲಿದೆ ಎಂದು ಹೇಳಿದ್ದರು. ಅದರಂತೆ ಅವರ ವಕೀಲರು ಮೈಸೂರಿಗೆ ಬಂದಾಗ ಮೈಸೂರಿನ ಕೆಲ ವಕೀಲರು ವಿರೋಧ ವ್ಯಕ್ತಪಡಿಸಿದರು. ಇದರ ನಡುವೆ ಜಗದೀಶ್ ನೇತೃತ್ವದ ವಕೀಲರ ತಂಡ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿಸಿದೆ.