ನಂಜನಗೂಡು: ಪ್ರಧಾನಿ ಮೋದಿ ಅವರು 2016 ರ ನವೆಂಬರ್ 8 ರಲ್ಲಿ 1000 ರೂ. ಹಾಗೂ 500 ರೂ.ಮುಖಬೆಲೆ ನೋಟುಗಳನ್ನು ಅಮಾನ್ಯೀಕರಣಗೊಳಿಸಿದರು, ಆದರೆ ಇಂದಿಗೂ ಮನೆಯಲ್ಲಿಟ್ಟಿರುವ ಅನೇಕರು ಅದನ್ನು ಬಿಸಾಡದೇ ನಂಜುಂಡೇಶ್ವರನಿಗೆ ಕಾಣಿಕೆ ಅರ್ಪಿಸುತ್ತಿದ್ದಾರೆ.
ದಕ್ಷಿಣಕಾಶಿ ಎಂದೇ ಖ್ಯಾತಿಗಳಿಸಿರುವ ನಂಜುಂಡೇಶ್ವರ ದೇವಾಲಯದಲ್ಲಿ ಮಂಗಳವಾರ 18 ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, ಅದರಲ್ಲಿ ಮೂರು ವರ್ಷಗಳ ಹಿಂದೆ ಅಮಾನ್ಯೀಕರಣ ಮಾಡಿದ 1000 ರೂ. ಹಾಗೂ 500 ರೂ.ಮುಖಬೆಲೆಯ ನೋಟುಗಳನ್ನು ದೇವರಿಗೆ ಚಲಾಯಿಸುವಂತೆ ಭಕ್ತರು ಕಾಣಿಕೆ ನೀಡಿದ್ದಾರೆ.
ಇದೀಗ ದೇವಸ್ಥಾನದ ಹುಂಡಿಗಳನ್ನು ತೆರೆದು ಎಣಿಕೆ ನಡೆಸಲಾಗಿದ್ದು, ರದ್ದಾದ 1000 ರೂ. ಮುಖಬೆಲೆಯ 1008 ನೋಟುಗಳು (10.08.000 ರೂಪಾಯಿ) 500 ರೂ. ಮುಖಬೆಲೆ 55 ನೋಟುಗಳು(27.500 ರೂಪಾಯಿ) 10,35,500 ರೂಪಾಯಿ ಪತ್ತೆಯಾಗಿದೆ.
ಉಳಿದಂತೆ 83,12,484 ರೂ ನಗದು, 54 ಗ್ರಾಂ ಚಿನ್ನ, 1 ಕೆಜಿ 400 ಗ್ರಾಂ ಬೆಳ್ಳಿ ಹಾಗೂ 15 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿದ್ದವು. 18 ಹುಂಡಿಗಳ ಹಣವನ್ನು ಎಣಿಕೆ ಮಾಡಲಾಗಿದ್ದು, ಇದು 20 ದಿನಗಳ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ ತಿಳಿಸಿದ್ದಾರೆ.