ಮೈಸೂರು: ರೈತರ ಓಡಾಡಟಕ್ಕೆ ತೊಂದರೆ ಆಗುತ್ತಿರುವುದನ್ನು ತಪ್ಪಿಸಲು ಅವರಿಗೆ ಗ್ರೀನ್ ಪಾಸ್ ವಿತರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಮಳೆ ಬಿದ್ದಿದ್ದು, ಇಲ್ಲಿ ರೈತರಿಗೆ ಗೊಬ್ಬರ, ಬೀಜ ಸಿಗುತ್ತಿಲ್ಲ ಎಂಬ ಬಗ್ಗೆ ರೈತರು ಗಮನಕ್ಕೆ ತಂದಿದ್ದಾರೆ. ಜೊತೆಗೆ ಬೇರೆ ಕಡೆ ಓಡಾಡಲು ರೈತರ ವಾಹನಗಳನ್ನು ಬಿಡುತ್ತಿಲ್ಲ, ತೊಂದರೆ ಪಡುತ್ತಿದ್ದಾರೆ ಎಂಬ ಬಗ್ಗೆ ಸಹ ಚರ್ಚೆಯಾಗಿದೆ. ಕೃಷಿ ಚಟುವಟಿಕೆಗಳು ನಿಲ್ಲದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ತಿಳಿಸಿದ್ದೇನೆ ಎಂದಿದ್ದಾರೆ.
ಇನ್ನು ರೈತರು ತಮ್ಮ ಹಳ್ಳಿಗೆ, ಜಮೀನಿಗೆ ಹೋಗಲು ಲಾಕ್ಡೌನ್ನಿಂದ ತೊಂದರೆಯಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ರೈತರ ಓಡಾಟಕ್ಕೆ ಗ್ರೀನ್ ಪಾಸ್ ವ್ಯವಸ್ಥೆ ಮಾಡುವಂತೆ ತಾಲೂಕು ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಇದರ ಜೊತೆಗೆ ರೈತರ ಟ್ರ್ಯಾಕ್ಟರ್ಗಳನ್ನು ರಿಪೇರಿ ಮಾಡಲು ಅವರ ಮನೆಗೆ ಟ್ರ್ಯಾಕ್ಟರ್ ಕಂಪನಿಯ ಮೆಕ್ಯಾನಿಕ್ಗಳಿಗೂ ಸಹ ಪಾಸ್ ವ್ಯವಸ್ಥೆ ಮಾಡಲು ತಿಳಿಸಿದ್ದೇವೆ ಎಂದಿದ್ದಾರೆ.