ಮೈಸೂರು: ಶ್ರೀನಿವಾಸ್ ಪ್ರಸಾದ್ ಅವರು ಚಾಮರಾಜನಗರ ಸಂಸದರಾಗಿ ಒಂದೂವರೆ ವರ್ಷ ಕಳೆಯಿತು. ಆ ಕ್ಷೇತ್ರಕ್ಕೆ ಅವರ ಸಾಧನೆ ಏನು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ಪ್ರಶ್ನಿಸಿದರು.
ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು, ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದೇ ಸಾಧನೆ ಎಂದು ಕೆಲವರು ಅಂದುಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಅವರು ಬಾದಾಮಿಯಲ್ಲೂ ಸೋತಿದ್ದರೆ ಗೊಂಡಾರಣ್ಯದಲ್ಲಿ ಅವಿತುಕೊಳ್ಳಬೇಕಿತ್ತು ಎಂದು ಕುಟುಕಿದರು. ನಮ್ಮದು ಅವಿತುಕೊಳ್ಳುವ ಜಾಯಮಾನವಲ್ಲ, ನಾನು ಚುನಾವಣೆಯಲ್ಲಿ ಸೋತ ದಿನ, ಅಂದು ಸಂಜೆಯೇ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡೆ. ಆದರೆ, ನನ್ನನ್ನು ಸೋಲಿಸಿದವರು ಕಳೆದ ಒಂದೂವರೆ ವರ್ಷದಿಂದ ನೀಡಿರುವ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.
ಶಿರಾ ಹಾಗೂ ಆರ್ಆರ್ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕೇವಲ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ಉಪ ಚುನಾವಣೆ ಸೋಲಿಗೆ ಸಾಮೂಹಿಕ ಹೊಣೆ ಹೊರಬೇಕಿದೆ. ಮುನಿರತ್ನ ಈ ಮೊದಲು ನಮ್ಮ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದವರು. ಆದರೆ, ಪಕ್ಷ ತೊರೆದಾಗ ಪಾಲಿಕೆ ಸದಸ್ಯರಿಂದ ಹಿಡಿದು, ಬ್ಲಾಕ್ ಮಟ್ಟದವರೆಗಿನ ಮುಖಂಡರನ್ನು ಅವರ ಜೊತೆ ಕರೆದೊಯ್ದರು, ಹಾಗಾಗಿ ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎಂದರು.
ಶಿರಾದಲ್ಲಿ ಸಾಕಷ್ಟು ಪೈಪೋಟಿ ನೀಡಿದ್ದೇವೆ. ಆದರೆ, ಉಪ ಚುನಾವಣೆಯಲ್ಲಿ ಮತದಾರರು ಆಳುವ ಪಕ್ಷಗಳ ಪರ ಮತ ಚಲಾಯಿಸುವುದು ವಾಡಿಕೆ. ಹಾಗಾಗಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಡಿಕೆಶಿ ಅವರನ್ನು ಮಾತ್ರ ಹೊಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ತಂಬಾಕು ಬೆಳೆಗೆ ಸೂಕ್ತ ಬೆಲೆ ಕೊಡಿ:
ತಂಬಾಕು ಬೆಳೆಗಾರರು ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಕೂಡಲೆ ಎಚ್ಚೆತ್ತು ತಂಬಾಕು ಬೆಳೆಗೆ ಸೂಕ್ತ ಬೆಲೆ ನೀಡಬೇಕು. ಹುಣಸೂರು, ಎಚ್ಡಿ ಕೋಟೆ, ಪಿರಿಯಾಪಟ್ಟಣದಲ್ಲಿ ಹೆಚ್ವಿನ ಬೆಳೆ ಬೆಳೆಯುತ್ತಾರೆ. 2019-20 ರಲ್ಲಿ 2.63 ಲಕ್ಷ ಟನ್ ರಫ್ತಾಗಿದೆ. ಈ ತಂಬಾಕು ಬೆಳೆಯಿಂದ 3.90 ಕೋಟಿ ಉದ್ಯೋಗ ಅವಕಾಶ ಸಿಗುತ್ತಿದೆ.
ಇದರಿಂದ ಸರ್ಕಾರಕ್ಕೆ ಸಾವಿರ ಕೋಟಿ ಲಾಭ ಬರುತ್ತಿದೆ. ಆದರೂ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸಿಗರೇಟು ತಯಾರಿಕಾ ಕಂಪನಿಗಳು ಸಾವಿರಾರು ಕೋಟಿ ಲಾಭ ಮಾಡುತ್ತಿವೆ. ಆದರೆ ತಂಬಾಕು ಮಂಡಳಿಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಶಾಸಕರಾದ ಎಚ್.ಪಿ.ಮಂಜುನಾಥ್ ಹಾಗೂ ಅನಿಲ್ ಚಿಕ್ಕಮಾದು ಮಾತನಾಡಿ, ಆಂಧ್ರ ಪ್ರದೇಶದ ಮಾದರಿಯಲ್ಲಿ ರಾಜ್ಯದ ತಂಬಾಕು ಬೆಳೆಗಾರರಿಗೆ ಸೂಕ್ತ ಬೆಲೆ ಕೊಡಬೇಕು ಎಂದು ಆಗ್ರಹಿಸಿದರು.