ಮೈಸೂರು : ರಾಜ್ಯದಲ್ಲಿ ಹಣಕಾಸಿನ ತೊಂದರೆ ಇದೆ ಅಂತಾ ಹೇಳುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚಿಲ್ಲರೆ ಬುದ್ದಿ ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕುಟುಕಿದರು.
ಸರಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣೆಯ ಕಟ್ಟಡ ಕುಸಿತ ವೀಕ್ಷಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವೇಳೆ ರಾಜ್ಯದಲ್ಲಿ ಹಣಕಾಸು ಸ್ಥಿತಿ ಸರಿಯಿಲ್ಲ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಮುಖ್ಯಮಂತ್ರಿಯಾಗಿದ್ದಾಗ ₹ 8 ಸಾವಿರ ಕೋಟಿ ರಾಜ್ಯದ ಖಜಾನೆಯಲ್ಲಿ ಇಟ್ಟಿದ್ದೀನಿ. ಪ್ರತಿ ಜಿಲ್ಲೆಗೂ ಹಣ ನೀಡಿದ್ದೀನಿ. ಅದೇ ಹಣ ಇದೆ. ಆದರೆ, ನೆರೆ-ಬರ ನಿರ್ವಹಣೆ ಹಣಕಾಸಿನ ಸಮಸ್ಯೆ ಇದೆ ಎಂದು ಹೇಳಿ ಚಿಲ್ಲರೆ ರಾಜಕಾರಣ ಮಾಡಬಾರದು ಎಂದರು.
ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹ ನಿರ್ವಹಣೆ ಯಡಿಯೂರಪ್ಪ ಸರ್ಕಾರಕ್ಕೆ ದೊಡ್ಡ ಸವಾಲು. ಈ ವಿಚಾರದಲ್ಲಿ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಈ ವಿಚಾರಗಳಲ್ಲಿ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗುವುದು ಮೊದಲ ಆದ್ಯತೆ. ಕೇಂದ್ರವೂ ಸಹ ಈ ವಿಚಾರದಲ್ಲಿ ತಕ್ಷಣ ಸ್ಪಂದಿಸಬೇಕು. ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಂದಿದ್ರು. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಅವರು ಸಹ ರಾಜ್ಯದ ನೆರೆ ಹಾವಳಿಗೆ ತುತ್ತಾದ ಜನರಿಗೆ ಸ್ಪಂದಿಸಬೇಕು ಎಂದರು.
ವಿಪಕ್ಷ ನಾಯಕನಾಗಿ ನೆರೆ-ಬರ ನಿರ್ವಹಣೆಗೆ ಹೋಗಲು ನಾವು ಸಿದ್ದ. ಆದರೆ, ಯಡಿಯೂರಪ್ಪ ಅವರು ಇದರ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಹಣಕಾಸಿನ ಸ್ಥಿತಿ ಸ್ಥಿರವಾಗಿದೆ. ಋಣಮುಕ್ತ ಕಾಯಿದೆ ಜಾರಿ ವಿಳಂಬ ಮಾಡುತ್ತಿರುವ ಮುಖ್ಯಮಂತ್ರಿ ಬಿಎಸ್‌ವೈ ವಿರುದ್ಧ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೊಳಿಸಬೇಕು. ರಾಜ್ಯದ ಯೋಜನೆಗಳ ಬಗ್ಗೆ ಡಂಗುರ ಸಾರಬೇಕು. ಇಂದು ಹಾಸನ ಮತ್ತು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಹುಣಸೂರು, ಹೆಚ್ ಡಿ ಕೋಟೆ, ನಂಜನಗೂಡಿಗೆ ಭೇಟಿ ಕೊಡುತ್ತೀನಿ ಎಂದರು.