ಮೈಸೂರು: ಸಂಸತ್‌ನಲ್ಲಿ ಕೆಲವರು ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತುತ್ತಾರೆ. ಜಯನಗರ ಹೋಟೆಲ್‌ನಲ್ಲಿ ವ್ಯವಹಾರ ಮಾಡುತ್ತಾರೆ. ರಾಯಲ್ಟಿ ಕಟ್ಟದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗ್ತಿದೆ ಅಂತಾರೆ. ರಾಯಲ್ಟಿ ಹಣ ಯಾರ ಖಜಾನೆ ತುಂಬುತ್ತಿದೆ ಎಂಬುದನ್ನು ಚರ್ಚೆ ಮಾಡಬೇಕಾದಾಗ ಮಾಡೋಣ ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಪರೋಕ್ಷವಾಗಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಜಿಲಿಟಿನ್ ಸ್ಫೋಟ ಪ್ರಕರಣದ ವಿಚಾರವಾಗಿ ಮಾತನಾಡಿ, ಅಕ್ರಮ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು. ಪೊಲೀಸರು, ಗಣಿ ಮಾಲೀಕರು ಹಾಗೇ ಪ್ರಕರಣ ಮುಚ್ಚಿ ಹಾಕ್ತಾರೆ. ಒಂದು ವಾರ, 10 ದಿನ ಅಷ್ಟೇ ಚರ್ಚೆ ಆಗುತ್ತದೆ ಎಂದರು.
ಬಳಿಕ ಒಕ್ಕಲಿಗರ ಮೀಸಲಾತಿ ಕುರಿತು ಪ್ರತಿಕ್ರಿಯಿಸಿ, ಒಕ್ಕಲಿಗರ ಮೀಸಲಾತಿ ವಿಚಾರವಾಗಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಅಧಿಕಾರಿದಲ್ಲಿರುವ ಸಚಿವರು ಮಾತ್ರ ಹೋಗಿದ್ದಾರೆ ಎಂದರು.
ಇನ್ನು ನಟ ಜಗ್ಗೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರೆಲ್ಲ ದೊಡ್ಡವರು, ಅವರ ಸಮಸ್ಯೆ ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದರು.
ಮೈಸೂರು ಮೇಯರ್ ಚುನಾವಣೆ ಸಂಬಂಧ ಮಾತನಾಡಿ, ಹಿಂದೆ ಮೈತ್ರಿ ಆದಾಗ ರಾಜ್ಯಮಟ್ಟದ ನಾಯಕರು ಮಾತುಕತೆ ನಡೆಸಿದ್ರು. ಈಗ ನಿಮ್ಮ ಸಹಕಾರ ಬೇಕೆಂದು ಈವರೆಗೂ ಮೇಲ್ಮಟ್ಟದ ಕಾಂಗ್ರೆಸ್ ನಾಯಕರು ಚರ್ಚೆ ಮಾಡಿಲ್ಲ. ಸಣ್ಣಪುಟ್ಟವರು ಮಾತನಾಡಿದರೆ ಪ್ರಯೋಜನ ಇಲ್ಲ ಎಂದರು.
ಬಿಜೆಪಿ ನಾಯಕರು ಸಂಪರ್ಕ ಮಾಡಿರುವುದು ನಿಜ, ಖುದ್ದು ಸಿಎಂ ಬಿಎಸ್‌ವೈ ದೂರವಾಣಿ ಮೂಲಕ ಮಾತನಾಡಿದ್ದಾರೆ. ಆದರೆ ಸಿದ್ದರಾಮಯ್ಯ ಈಗಲೇ ಸಿಎಂ ಆಗಿದ್ದೀನಿ ಎಂಬ ಕನಸು ಕಾಣ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಹಿಂದೆ ಇದ್ದ ಸಂಸ್ಕೃತಿಯೇ ಬೇರೆ. ಸಿದ್ದರಾಮಯ್ಯ ಹೋದ ಮೇಲೆ ಇರುವ ಸಂಸ್ಕೃತಿಯೇ ಬೇರೆ. ಅವರ ನಡವಳಿಕೆಗಳು, ಅಗೌರವದ ಮಾತುಗಳು ಎಲ್ಲವನ್ನೂ ನೋಡ್ತಿದ್ದೀನಿ ಎಂದರು.
ಇದನ್ನೂ ಓದಿ: ಮೈಸೂರು ಪಾಲಿಕೆ ಮೇಯರ್ ಚುನಾವಣೆಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್