ಮೈಸೂರು: ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆಯಾಗುವ ಮೂಲಕ ಭಯದ ವಾತಾವರಣ ದೂರ ಮಾಡಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕಾಡನಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬುವವರ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ 5 ವರ್ಷದ ಗಂಡು ಚಿರತೆ ಬಿದ್ದಿದೆ. ಹಲವು ದಿನಗಳಿಂದ ಗ್ರಾಮದಲ್ಲಿ ಜಾನುವಾರಗಳನ್ನ ತಿಂದು ಭಯ ಹುಟ್ಟಿಸಿದ್ದ ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಕಳೆದ ಒಂದು ವಾರದ ಹಿಂದೆ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು. ಆಹಾರ ಅರಸಿ ಬಂದ ಚಿರತೆ ಶುಕ್ರವಾರ ತಡರಾತ್ರಿ ಬೋನಿಗೆ ಬಿದ್ದಿದೆ.
ಇಂದು ಗ್ರಾಮಸ್ಥರು ಜಮೀನಿನ ಕಡೆ ಹೋದಾಗ ಬೋನಿಗೆ ಚಿರತೆ ಬಿದ್ದಿರುವುದನ್ನು ಕಂಡು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸೆರೆ ಸಿಕ್ಕಿರುವ ಚಿರತೆಯನ್ನು ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.