ಮೈಸೂರು: ವಿದ್ಯುತ್ ದುರಸ್ತಿ ಮಾಡುವಾಗ ಕೆಪಿಟಿಸಿಎಲ್ ಅಧಿಕಾರಿಗಳು ಪವರ್ ಆನ್ ಮಾಡಿಸಿದ್ದ ಹಿನ್ನೆಲೆ ಪವರ್ಮ್ಯಾನ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ರಾಂಪುರ ನಾಲೆ ಬಳಿ ಪವರ್ ಲೈನ್ ಹಾಳಾಗಿತ್ತು, ಇದನ್ನು ಸರಿಮಾಡಲು ಕೆಪಿಟಿಸಿಎಲ್ ನೌಕರ ಮಂಜು ಎಂಬುವವರು ವಿದ್ಯುತ್ ಕಂಬ ಏರಿದ್ದರು. ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ಹಾಗೂ ಪವರ್ ಸ್ಟೇಷನ್ ಇನ್ಚಾರ್ಜ್ ಪುಟ್ಟರಾಜು ಪವರ್ ಆನ್ ಮಾಡಿಸಿದ್ದು, ಪವರ್ ಮ್ಯಾನ್ ಮಂಜುಗೆ ವಿದ್ಯುತ್ ತಗುಲಿದೆ.
ವಿದ್ಯುತ್ ತಗುಲಿದ್ದರಿಂದಾಗಿ ಕಂಬದಿಂದ ಕೆಳಗೆ ಬಿದ್ದ ಮಂಜು ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಬಳಿಕ ಆತನನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂತೋಷ್ ಕುಮಾರ್ ಹಾಗೂ ಪುಟ್ಟರಾಜು ಅವರ ಬೇಜವಾಬ್ದಾರಿಯಿಂದ ಪವರ್ಮ್ಯಾನ್ಗೆ ತೀವ್ರ ಗಾಯವಾಗಿದೆ ಎಂದು ಮಂಜು ಪರ ಸಾಮಾಜಿಕ ಹೋರಾಟಗಾರ ಕೃಷ್ಣ ಅವರು ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.