ಮೈಸೂರು: 'ಬೋಲೇ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ' ಎಂಬ ವಿಡಿಯೋ, ಆಡಿಯೋ ಪ್ರಕರಣ ಸಂಬಂಧ ನಂಜನಗೂಡಿನ ಬಿಜೆಪಿ ಕಾರ್ಯಕರ್ತರು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಂಜನಗೂಡು ದೊಡ್ಡಕವಲಂದೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈಗಾಗಲೇ ಈ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಸಿಎಂ, ಮೈಸೂರು ಎಸ್ಪಿ ಜೊತೆ ಮಾತುಕತೆ ನಡೆಸುತ್ತೇನೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ನಂಜನಗೂಡು ತಾಲೂಕಿನ ದೊಡ್ಡಕವಲಂದೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರಸ್ತೆಯಲ್ಲಿ ನೂರಾರು ಜನರಿದ್ದ ಗುಂಪೊಂದು ಮನೆಗೆ ತೆರಳುತ್ತಿ ವೇಳೆ ಸೆರೆಯಾದ ವಿಡಿಯೋ ಇದಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬೋಲೇ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ ಎಂದು ಹೇಳಿರುವ ಧ್ವನಿ ವಿಡಿಯೋದಲ್ಲಿ ಕೇಳಿ ಬರುತ್ತದೆ.
ಈ ಬಗ್ಗೆ ನಂಜನಗೂಡಿನ ಬಿಜೆಪಿ ನಗರಸಭಾ ಸದಸ್ಯ ಕಪಿಲೇಶ್ ಕವಲಂದೆ ಪೊಲೀಸ್ ಠಾಣೆ ಹಾಗೂ ನಂಜನಗೂಡಿನ ವೃತ್ತನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್ ಅವರಿಗೆ ದೂರು ನೀಡಿದ್ದಾರೆ. ಕೂಡಲೇ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಂಡು ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ವಿವಾಹ ನೋಂದಣಿ ಕಚೇರಿ ಸಮೀಪಿಸುತ್ತಿದ್ದಂತೆ ಯುವಕ ಪರಾರಿ.. ಪ್ರೀತಿಸಿದಾಕೆ ಕಂಗಾಲು!