ಮೈಸೂರು: ಮುಂದಿನ 6 ತಿಂಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ 336 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಕುಲಪತಿ ಪ್ರೊ. ಜಿ ಹೇಮಂತ್‌ಕುಮಾರ್ ಸಾಮಾನ್ಯ ಸಭೆಯ ನಂತರ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2007ರಿಂದ ಈವರೆಗೆ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಮುಂದಿನ ವರ್ಷ ನ್ಯಾಕ್ ಕಮಿಟಿ ವಿವಿಗೆ ಬರುತ್ತಿರುವುದರಿಂದ ಬೋಧಕ ಹುದ್ದೆಯನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ಯುಜಿಸಿಯ ಅನುದಾನ ಕಡಿತವಾಗುವ ಸಂಭವ ಇದೆ. ಈ ಕುರಿತು ಸರ್ಕಾರ ಸಹ ಸೂಚನೆ ನೀಡಿದೆ ಎಂದರು.
336 ಹುದ್ದೆಗಳಿಗೆ ಭರ್ತಿ ಹೀಗೆ :
ಈಗಾಗಲೇ ಮೈಸೂರು ವಿವಿಯಲ್ಲಿ ಕಳೆದ 12 ವರ್ಷಗಳಿಂದ ಬೋಧಕ ಹುದ್ದೆಗಳನ್ನು ನೇಮಕ ಮಾಡಿಲ್ಲ ಹಾಗೂ ಈ ಅವಧಿಯಲ್ಲಿ ಅನೇಕರು ನಿವೃತ್ತಿ ಹೊಂದಿದ್ದಾರೆ. ಆದರೆ, ಆ ಸ್ಥಳಕ್ಕೆ ಯಾವುದೇ ನೇಮಕಾತಿ ಮಾಡಲಾಗಿಲ್ಲ. ಇದರಿಂದ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ. ರಾಜ್ಯ ಸರ್ಕಾರದ ಅನುಮೋದನೆ ಪಡೆದು ಮೊದಲ ಹಂತವಾಗಿ 54 ಹೈದರಾಬಾದ್ ಕರ್ನಾಟಕ ಹಾಗೂ 75 ಬ್ಯಾಕ್ಲಾಗ್ ಸೇರಿದಂತೆ ಒಟ್ಟು 130 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ನಂತರ 206 ಹುದ್ದೆಗಳನ್ನು ರೋಸ್ಟರ್ ಪದ್ಧತಿಯಂತೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಕುಲಪತಿ ಮಾಹಿತಿ ನೀಡಿದರು.