ಮೈಸೂರು: ರೈತನ ಮಕ್ಕಳಿಗೆ 45 ವರ್ಷ ತುಂಬಿದರೂ ಕನ್ಯೆ ಸಿಗುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆಯಾಗಿ ನಿರ್ಮಾಣಗೊಂಡಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸಲು ರೈತ ಸಂಘದಿಂದ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ರೈತ ಸಂಘದಿಂದ ಜಾಗೃತಿ ಆಂದೋಲನ: ಈಟಿವಿ ಭಾರತ ಜೊತೆ ಮಾತನಾಡಿದ ಅವರು, ರೈತರಿಗೆ ಆಗುವ ಅನ್ಯಾಯದ ವಿರುದ್ಧ ರೈತ ಸಂಘ ಇಲ್ಲಿಯವರೆಗೆ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ ಯಾರೂ ರೈತರ ಮಕ್ಕಳಿಗೆ ಹಾಗೂ ಯುವ ರೈತರಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆಯಾಗಿ ರೈತರನ್ನು ಚಿಂತೆಗೇಡು ಮಾಡಿದೆ ಎಂದಿದ್ದಾರೆ.
ಮೊದಲ ಬಾರಿಗೆ ರೈತರ ಸಾಮಾಜಿಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ರಾಜ್ಯ ರೈತ ಸಂಘ ಹಸಿರು ಸೇನೆ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ. ಈ ಆಂದೋಲನದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡಿ ಎಂಬ ವಿಚಾರದ ಬಗ್ಗೆ ಸಾಮಾಜಿಕ ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
45 ವರ್ಷ ತುಂಬಿದರೂ ರೈತರ ಮಕ್ಕಳ ಮದುವೆ ಇಲ್ಲ: ರಾಜ್ಯದ ಎಲ್ಲಾ ಕಡೆ ಈ ಸಮಸ್ಯೆ ಇದೆ. ರೈತರಿಗೆ ಹೆಣ್ಣು ಸಿಗದೇ ಇರಲು ಕಾರಣ ಹಳ್ಳಿಗಳಲ್ಲಿ ಮೂಲ ಸೌಲಭ್ಯಗಳ ಕೊರತೆ, ರೈತರಿಗೆ ಆದಾಯ ಖಾತರಿ ಇಲ್ಲ, ಹೆಣ್ಣು ಕೊಟ್ಟರೆ ಗಂಡನ ಮನೆಯವರು ನಾಳೆ ಹೇಗೆ ಸಾಕುತ್ತಾರೆ ಎಂಬ ಚಿಂತೆಯಿಂದ ಪೋಷಕರು ಹೆಣ್ಣು ಕೊಡುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆ, ಸರ್ಕಾರ ಪರಿಗಣಿಸಿ ಪರಿಹಾರ ಒದಗಿಸಬೇಕು. ಈ ಸಮಸ್ಯೆ ನಿವಾರಣೆ ಹಾಗೂ ರೈತರ ಮಕ್ಕಳ ಮದುವೆಗಾಗಿ ಸರ್ಕಾರ ಯೋಜನೆ ಜಾರಿಗೆ ತರಬೇಕು ಎಂದು ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ.
5 ಲಕ್ಷ ಪ್ರೋತ್ಸಾಹಧನ ಸರ್ಕಾರ ನೀಡಬೇಕು: ನಮ್ಮ ಅಭಿಯಾನದ ಮುಖ್ಯ ಉದ್ದೇಶ ಹೆಣ್ಣು ಮಕ್ಕಳಿಗೆ ಕೃಷಿಯಿಂದ ಬದುಕು ಕಟ್ಟಿಕೊಳ್ಳಬಹುದು ಎಂಬ ಅರಿವು ಮೂಡಿಸುವುದು. ರೈತರ ಮಕ್ಕಳನ್ನು ಮದುವೆ ಆದರೆ ಸರ್ಕಾರ 5 ಲಕ್ಷ ಪ್ರೋತ್ಸಾಹಧನ ನೀಡಬೇಕು. ಕನಿಷ್ಠ 25 ಲಕ್ಷ ರೂ. ಯಾವುದೇ ಗ್ಯಾರಂಟಿ ಇಲ್ಲದೆ ಸರ್ಕಾರ ರೈತರ ಮಕ್ಕಳಿಗೆ ಲೋನ್ ನೀಡುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದ್ದಾರೆ.
ರೈತ ಸಂಘದಿಂದ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಅದಕ್ಕಾಗಿ ರೈತರ ಮಕ್ಕಳಿಗೆ ಹೆಣ್ಣು ಕೊಡಿ, ರೈತರ ಮಕ್ಕಳನ್ನು ಮದುವೆಯಾದ್ರೆ 5 ಲಕ್ಷ ಪ್ರೋತ್ಸಾಹ ಧನ ನೀಡಬೇಕೆಂಬ ವಿಚಾರದ ಬಗ್ಗೆ ಚರ್ಚೆ ಮಾಡಲು ಸಮಾವೇಶ ನಡೆಸಲಾಗುವುದೆಂದು ಹೇಳಿದರು.
ಅರ್ಜುನನ ಸಾವು ತುಂಬ ನೋವು ತಂದಿತು: ಅರ್ಜುನನ ಸಾವು ನಮಗೆ ಬಹಳ ನೋವು ತಂದಿದೆ. ಗಟ್ಟಿಯಾದ ಸಂಸಾರದಲ್ಲಿ ಒಬ್ಬ ಮನೆಯವರೇ ತೀರಿಕೊಂಡಷ್ಟು ನೋವಾಗಿದೆ. ಚಿನ್ನದ ಅಂಬಾರಿ ಹೊರುತ್ತಿದ್ದ ಆನೆ ಆರ್ಜುನ, ಪುನಃ ಅಂತಹ ಆನೆಯನ್ನ ತಯಾರು ಮಾಡುವುದು ಕಷ್ಟ. ಅರ್ಜುನನ ಸಾವು ಬಹಳ ನೋವಿನ ಸಂಗತಿ ಎಂದು ಬಡಗಲಪುರ ನಾಗೇಂದ್ರ ಬೇಸರ ವ್ಯಕ್ತಪಡಿಸಿದರು.