ಮೈಸೂರು: ಪುಟ್ಟ ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಇಷ್ಟಪಡುವ ಸಿಹಿ ಎಂದರೆ ಅದು ಮೈಸೂರು ಪಾಕ್. ಇಂತಹ ಮೈಸೂರು ಪಾಕಿಗೆ ಈಗ ವಿಶ್ವ ಮನ್ನಣೆ ದೊರೆತಿದೆ. ಅದರಲ್ಲೂ ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ನಗರದ ದೇವರಾಜ ಮಾರುಕಟ್ಟೆಯ ಮಳಿಗೆಯಲ್ಲಿರುವ ಒರಿಜಿನಲ್ ಮೈಸೂರು ಪಾಕ್ ಗುರು ಸ್ವೀಟ್ಸ್ ಅಂಗಡಿಗೆ ಭೇಟಿ ನೀಡಿ ಜೋರಾಗಿ ಖರೀದಿ ಮಾಡುತ್ತಿದ್ದಾರೆ.
ಮೈಸೂರು ಪಾಕ್ ಹುಟ್ಟು, ತಯಾರಿಕೆ, ನವರಾತ್ರಿ ಸಂದರ್ಭದಲ್ಲಿ ಖರೀದಿ ಕುರಿತು ಮೈಸೂರು ಪಾಕ್ ತಯಾರಿಕೆಯ ವಂಶಸ್ಥರಾದ ಕಾಕಾಸುರ ಮಾದಪ್ಪನವರ ನಾಲ್ಕನೇ ತಲೆಮಾರಿನ ನಟರಾಜ್ ಈಟಿವಿ ಭಾರತದ ಜೊತೆ ಮಾತನಾಡಿದರು.
ಮೈಸೂರು ಪಾಕ್ ಹುಟ್ಟಿದ್ದು ಹೇಗೆ ಗೊತ್ತೇ?: ಮೈಸೂರು ಸಂಸ್ಥಾನದ ಚಾಮರಾಜೇಂದ್ರ ಒಡೆಯರ್ ಅರಮನೆಗೆ ಅತಿಥಿಗಳು ಬಂದಾಗ, ಅರಮನೆಯ ಅಡಿಗೆ ಭಟ್ಟರಾದ ಕಾಕಾಸುರ ಮಾದಪ್ಪನವರಿಗೆ ಮಹಾರಾಜರು ಅತಿಥಿಗಳಿಗಾಗಿ ಒಂದು ಸಿಹಿ ತಿಂಡಿ ಮಾಡಲು ಹೇಳಿದರಂತೆ. ಆಗ ಕಾಕಾಸುರ ಮಾದಪ್ಪ ಒಂದು ಸಿಹಿ ತಿಂಡಿ ಮಾಡಿ, ಮಹಾರಾಜರಿಗೆ ನೀಡಿದ್ದರು. ಮಹಾರಾಜರು ಅದನ್ನು ತಿಂದು ತುಂಬಾ ಚೆನ್ನಾಗಿದೆ, ಇದರ ಹೆಸರೇನು ಎಂದು ಕೇಳಿದ್ದಾರೆ. ಆಗ ಅವರು ಇದಕ್ಕೆ ಹೆಸರಿಲ್ಲ, ನೀವೇ ಒಂದು ಹೆಸರು ಹೇಳಿ ಎಂದಾಗ, ಮಹಾರಾಜರು ಪಾಕದಿಂದ ತಯಾರಾದ ಸಿಹಿ ತಿಂಡಿ ಇದು, ಇದಕ್ಕೆ ಮೈಸೂರು ಪಾಕ್ ಎಂದು ಕರೆದರು. ಅಲ್ಲಿಂದ ಈ ತಿಂಡಿ ಮೈಸೂರು ಪಾಕ್ ಆಗಿ ಪ್ರಸಿದ್ದಿ ಪಡೆಯಿತು.
ಮೈಸೂರಿಗೆ ಯಾರೇ ಪ್ರವಾಸಿಗರು ಬಂದರೂ, ಮೂಲ ಮೈಸೂರು ಪಾಕ್ ಅಂಗಡಿ, ಅಂದರೆ ಕಾಕಾಸುರ ಮಾದಪ್ಪನವರ ನಾಲ್ಕು ಮತ್ತು ಐದನೇ ತಲೆಮಾರು, ಈಗಲೂ ತಮ್ಮ ಮನೆಯ ಪಕ್ಕದಲ್ಲಿರುವ ಅಡಿಗೆ ಮನೆಯಲ್ಲೇ ತಯಾರಿಸುವ ಒರಿಜಿನಲ್ ಮೈಸೂರು ಪಾಕ್ ತೆಗೆದುಕೊಂಡು ಹೋಗುತ್ತಾರೆ. ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಅರಮನೆ, ಜಂಬೂಸವಾರಿ, ಮೈಸೂರಿನ ದೀಪಾಲಂಕಾರ ನೋಡ ಬರುವ ಪ್ರವಾಸಿಗರು ತಪ್ಪದೇ ಮೈಸೂರು ಪಾಕ್ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ ನಟರಾಜ್.
ಮೈಸೂರು ಪಾಕ್ ರಿಸಿಪಿ ಏನು?: ಶುದ್ಧ ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಅರಿಶಿಣ, ಏಲಕ್ಕಿ ಪದಾರ್ಥಗಳನ್ನು ಬಳಸಿ ಮೈಸೂರು ಪಾಕ್ ಅನ್ನು ಕಳೆದ ಐದು ತಲೆಮಾರಿನಿಂದಲೂ ತಯಾರಿಸುತ್ತಾ ಬಂದಿರುವ ಈ ಕುಟುಂಬ ಈಗಲೂ ದೇವರಾಜ ಮಾರುಕಟ್ಟೆಯಲ್ಲಿರುವ ಚಿಕ್ಕ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಖುಷಿಯಿಂದ ಸರತಿ ಸಾಲಿನಲ್ಲಿ ನಿಂತು ಜನರು ಮೈಸೂರು ಪಾಕ್ ಖರೀದಿಸುತ್ತಾರೆ. ನವರಾತ್ರಿ ಸಂದರ್ಭದಲ್ಲಿ ಪ್ರಪಂಚದ ಎಲ್ಲೆಡೆಯಿಂದ ಬರುವ ಪ್ರವಾಸಿಗರು, ಮೈಸೂರಿನ ಪ್ರವಾಸಿ ತಾಣಗಳನ್ನು ನೋಡಿಕೊಂಡು ಬಂದು ಮೈಸೂರು ಪಾಕ್ ಖರೀದಿಸಿ ಹೋಗುತ್ತಾರೆ. ಅದರಲ್ಲೂ ದಸರಾ ಸಂದರ್ಭದಲ್ಲೂ ವ್ಯಾಪಾರ ಜೋರಾಗಿದೆ ಎಂದು ಗುರು ಸ್ವೀಟ್ಸ್ ಮಾಲಿಕ ನಟರಾಜ್ ಹೇಳಿದರು.
ಇದನ್ನೂ ಓದಿ: Mysore Pak: 'ಮೈಸೂರು ಪಾಕ್'ಗೆ ವಿಶ್ವದ ಪ್ರಮುಖ 50 ಸ್ಟ್ರೀಟ್ ಫುಡ್‌ಗಳ ಪಟ್ಟಿಯಲ್ಲಿ 14ನೇ ಸ್ಥಾನ: ಮೂಲಸ್ಥರ ಸಂತಸ
ದೇಶ-ವಿದೇಶಗಳಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಮೈಸೂರಿನ ಪ್ರಸಿದ್ಧ ಸಿಹಿತಿಂಡಿ ಮೈಸೂರು ಪಾಕ್ ವಿಶ್ವದ ಪ್ರಮುಖ 50 ಅತ್ಯುತ್ತಮ ಸ್ಟ್ರೀಟ್ ಫುಡ್ ಖಾದ್ಯಗಳಲ್ಲಿ 14ನೇ ಸ್ಥಾನ ಪಡೆದಿದೆ. ಜಾಗತಿಕ ಟ್ರಾವೆಲ್ ಆನ್ಲೈನ್ ಮಾರ್ಗದರ್ಶಿ ಟೇಸ್ಟಿ ಅಟ್ಲಾಸ್ ಇತ್ತೀಚೆಗಷ್ಟೇ ವಿಶ್ವದ ಅತ್ಯುತ್ತಮ ಸಿಹಿ ತಿನಿಸುಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ 4.4 ರೇಟಿಂಗಿನೊಂದಿಗೆ ಮೈಸೂರು ಪಾಕ್ಗೆ 14ನೇ ಸ್ಥಾನ ನೀಡಿದೆ. ಜಾಗತಿಕ ಮಟ್ಟದಲ್ಲಿ ಮೈಸೂರು ಪಾಕ್ ಮನ್ನಣೆ ಪಡೆದಿದ್ದಕ್ಕೆ ಹಲವರು ಹೆಮ್ಮೆ ವ್ಯಕ್ತಪಡಿಸಿದ್ದರು.