ಮೈಸೂರು: ಇತ್ತೀಚೆಗೆ ಸಾಮಾನ್ಯವಾಗಿ ಪ್ರತಿದಿನ ಕೇಳಿಬರುತ್ತಿರುವ ಶಬ್ದ ಚಿರತೆ ದಾಳಿ, ಚಿರತೆ ಸೆರೆ, ಚಿರತೆ ಸಂಚಾರ, ಆತಂಕದಲ್ಲಿ ಗ್ರಾಮಸ್ಥರು ಎಂಬುದು ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಹಾಗಾದರೆ ಏಕಾಏಕಿ ಚಿರತೆ ದಾಳಿ ಹೆಚ್ಚಾಗಲು ಕಾರಣವೇನು. ಅರಣ್ಯ ಇಲಾಖೆ ಈ ಬಗ್ಗೆ ಕೈಗೊಂಡ ಕ್ರಮಗಳೇನು ಎಂಬ ಮಾಹಿತಿಯ ವಿಶೇಷ ವರದಿ ಇಲ್ಲಿದೆ.
ಚಿರತೆ ಕುರುಚಲು ಅರಣ್ಯ ಪ್ರದೇಶ ಅಥವಾ ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುವ ಪ್ರಾಣಿಯಾಗಿದೆ. ಇತ್ತೀಚೆಗೆ ನಗರೀಕರಣ ಹೆಚ್ಚಾಗಿದ್ದು, ಕಾಡುಗಳ ಹಾಗೂ ಕುರುಚಲು ಗಿಡಗಳ ನಾಶದಿಂದ ತಮ್ಮ ಆಹಾರ ಅರಸಿ ಗ್ರಾಮಗಳತ್ತ ಚಿರತೆಗಳು ಬರುತ್ತಿದ್ದು ಅಲ್ಲಿ ಬೀದಿ ನಾಯಿಗಳ, ಮೇಕೆ/ಕುರಿ, ಜಾನುವಾರುಗಳ ಮೇಲೆ ದಾಳಿ ಮಾಡುವುದು ಸಾಮಾನ್ಯ.
ಆದರೇ, ಇತ್ತೀಚೆಗೆ ತಿ.ನರಸೀಪುರದ ಲಿಂಗಯ್ಯನ ಹುಂಡಿ ಗ್ರಾಮದ ಯುವಕನ ಮೇಲೆ ಮಲ್ಲಪ್ಪನ ಬೆಟ್ಟದ ಸಮೀಪ ಚಿರತೆ ದಾಳಿ ಮಾಡಿ ಯುವಕನನ್ನು ಕೊಂದಿತ್ತು. ಜೊತೆಗೆ ಬೀದಿ ನಾಯಿ ಹಿಡಿಯಲು ಬಂದ ಚಿರತೆ ಗಾಬರಿಯಿಂದ ಕೆ.ಆರ್ ನಗರದ ಹೊರ ಹೊಲಯದ ಕನಕ ಬಡಾವಣೆಗೆ ನುಗ್ಗಿ 3 ಜನರ ಮೇಲೆ ದಾಳಿ ಮಾಡಿತ್ತು. ಹಾಗೂ ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿ ಗ್ರಾಮವೊಂದರ ಮನೆಯ ಕುರಿ ಕೊಟ್ಟಿಗೆಗೆ ನುಗ್ಗಿತ್ತು. ಇಂದು ಕೆ.ಆರ್.ಎಸ್ನ ವಿಶ್ವ ಪ್ರಸಿದ್ಧ ಬೃಂದಾವನ ಬಳಿ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಆತಂಕ ಉಂಟುಮಾಡಿದೆ. ಹೀಗೆ ಪ್ರತಿದಿನ ಒಂದೊಂದು ಚಿರತೆ ದಾಳಿಯ ಪ್ರಕರಣಗಳು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಯ ಗಡಿ ಭಾಗಗಳಲ್ಲಿ ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಜನ ಪ್ರತಿನಿಧಿಗಳು ಚಿರತೆ ದಾಳಿ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ.
ಚಿರತೆ ದಾಳಿ ಬಗ್ಗೆ ತಜ್ಞರು ಹೇಳುವುದೇನು?: ಚಿರತೆಯ ದಾಳಿಯ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಪರಿಸರ ತಜ್ಞರಾದ ರವಿಕುಮಾರ್ ಮಾತನಾಡಿ, ಚಿರತೆಗಳು ಕಾಡಿನಿಂದ ಬಂದು ದಾಳಿ ಮಾಡುತ್ತಿಲ್ಲ. ನಾವೇ ಕಾಡನ್ನು ಅತಿಕ್ರಮಣ ಮಾಡಿಕೊಂಡಿದ್ದೇವೆ. ಚಿರತೆ ವಾಸವಿರುವ ಪ್ರದೇಶ ಕುರುಚಲು ಹುಲ್ಲುಗಾವಲು ಪ್ರದೇಶವಾಗಿದ್ದು, ಅತಿಯಾದ ನೀರು ಹಾಗೂ ಹಸಿರಾದ ಪ್ರದೇಶವು ಚಿರತೆಯ ವಾಸಸ್ಥಾನವಾಗಿದೆ. ಮುಖ್ಯವಾಗಿ ನಗರದ ಹೊರವಲಯದ ಕುರುಚಲು ಗಿಡಗಳಿರುವ ಹಾಗೂ ಬೆಟ್ಟಗಳಿರುವ ಜಾಗದಲ್ಲಿ ಚಿರತೆ ವಾಸವಾಗಿರುತ್ತದೆ.
ಅಲ್ಲಿ ಅವುಗಳಿಗೆ ಬೇಕಾದ ಆಹಾರಗಳು ಮತ್ತು ಸಣ್ಣ ಪ್ರಾಣಿಗಳು ಇರುತ್ತವೆ. ಆದರೇ, ಅವುಗಳನ್ನು ನಗರೀಕರಣ ಹೆಸರಿನಲ್ಲಿ ನಾವು ಬಡಾವಣೆಗಳನ್ನು ನಿರ್ಮಿಸಿಕೊಂಡು ಅವುಗಳ ಆಶ್ರಯತಾಣವನ್ನು ಆಕ್ರಮಿಸಿಕೊಂಡಿದ್ದೇವೆ. ಈಗ ಅವುಗಳಿಗೆ ಆಹಾರ ಸಮಸ್ಯೆ ಎದುರಾಗಿದ್ದು, ಅದಕ್ಕಾಗಿ ಅವು ದಾಳಿ ಮಾಡುತ್ತಿವೆ ಎಂದರು.
ಆದರೇ, ನಾವು ಪರಿಸರದಲ್ಲಿ ಮುಂದಿನ ದಿನಗಳಲ್ಲಿ ಚಿರತೆಗಳ ವಾಸಸ್ಥಾನವನ್ನು ಬಿಟ್ಟು ಬದುಕಬೇಕಿದ್ದು ಆಗ ಮಾತ್ರ ದಾಳಿ ಕಡಿಮೆ ಮಾಡಬಹುದು. ಮುಖ್ಯವಾಗಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ತೀರ ಕಡಿಮೆ. ಪ್ರಾಣಿಗಳ ಜೀವನಕ್ಕೆ ತೊಂದರೆ ಬಂದಾಗ ಈರೀತಿ ದಾಳಿಗಳು ನಡೆಯುವುದು ಸಹಜ. ಚಿರತೆಗಳ ಸೆರೆಗೆ ಸರ್ಕಾರ ಕೈಗೊಳ್ಳುವ ಕ್ರಮಗಳೆಂದರೆ ಅವುಗಳನ್ನು ಹಿಡಿಯುವುದು, ಬೇರೊಂದು ಅರಣ್ಯ ಪ್ರದೇಶಗಳಿಗೆ ಬಿಟ್ಟು ಬರುವುದು.
ಆದರೆ ಬಿಟ್ಟು ಬಂದ ಚಿರತೆ ಆ ಸ್ಥಳದ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾದಾಗ ಮತ್ತೆ ಮಾಮೂಲಿ ಸ್ಥಳಕ್ಕೆ ಬರುತ್ತವೆ. ಈ ಸಂದರ್ಭದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದಕ್ಕೆ ಮನುಷ್ಯನೇ ಕಾರಣವಾಗಿದ್ದು, ಚಿರತೆಯ ದಾಳಿಗೆ ನಗರೀಕರಣ ಅವುಗಳ ಆವಾಸ ಸ್ಥಾನಗಳ ನಾಶ ಹಾಗೂ ಪರಿಸರದ ಮೇಲೆ ಮಾನವನ ದೌರ್ಜನ್ಯ ಕಾರಣವಾಗಿದ್ದು, ಪರಿಸರ ಸಮತೋಲನಕ್ಕೆ ಚಿರತೆಗಳು ಮುಖ್ಯ ಎನ್ನುತ್ತಾರೆ ಪರಿಸರ ತಜ್ಞ ರವಿಕುಮಾರ್.
ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?: ಸಾಮಾನ್ಯವಾಗಿ ಚಿರತೆ ದಾಳಿಯಾದಾಗ ಮೊದಲು ನೆನಪಿಗೆ ಬರುವುದೇ ಅರಣ್ಯ ಇಲಾಖೆ. ತಕ್ಷಣ ಚಿರತೆ ಕಂಡಾಗ ಅರಣ್ಯ ಇಲಾಖೆಗೆ ಮಾಹಿತಿ ಕೊಡುತ್ತಾರೆ. ಆಗ ಅರಣ್ಯ ಇಲಾಖೆಯವರು ಚಿರತೆ ಓಡಾಡುವ ಸ್ಥಳದಲ್ಲಿ ಸೆರೆಗಾಗಿ ಬೋನ್ ಮತ್ತು ಕ್ಯಾಮರಾ ಅಳವಡಿಸುತ್ತಾರೆ.
ಚಿರತೆ ಸೆರೆ ಸಿಕ್ಕಾಗ ಅದನ್ನು ಅಭಯರಣ್ಯಕ್ಕೆ ಬಿಟ್ಟು ಬರುತ್ತಾರೆ. ಜೊತೆಗೆ ಜಾನುವಾರುಗಳು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದಾಗಲೂ ಸಹ ಅವುಗಳನ್ನು ಸೆರೆ ಹಿಡಿಯುತ್ತಾರೆ. ಮುಖ್ಯವಾಗಿ ಅರಣ್ಯ ಇಲಾಖೆ ಚಿರತೆಗಳನ್ನು ಬೋನ್ ನಲ್ಲಿ ಸೆರೆ ಹಿಡಿದು, ಅವುಗಳು ಸೆರೆ ಸಿಕ್ಕ ನಂತರ ಅವುಗಳಿಗೆ ಆರೋಗ್ಯ ತಪಾಸಣೆ ಮಾಡಿ ಬಿಡುವುದು ನಮ್ಮ ಕೆಲಸ.
ಇನ್ನು, ಮನುಷ್ಯರ ಮೇಲೆ ದಾಳಿ ಮಾಡುವುದು ಅಪರೂಪ. ಅಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳ ಸೆರೆಗೆ ಕ್ರಮ ವಹಿಸುತ್ತಾರೆ. ಮುಖ್ಯವಾಗಿ ಎಷ್ಟು ಚಿರತೆಗಳನ್ನು ಸೆರೆ ಹಿಡಿಯುತ್ತೇವೆ, ಎಷ್ಟು ಚಿರತೆಗಳು ಸಂಘರ್ಷದ ಸಮಯದಲ್ಲಿ ಸಾವನ್ನಪ್ಪಿವೆ ಮತ್ತು ಚಿರತೆ ದಾಳಿಯಿಂದ ಸಾಕು ಪ್ರಾಣಿಗಳು, ಜಾನುವಾರುಗಳ ಸಾವಿನ ಬಗ್ಗೆ ಖಚಿತ ಅಂಕಿ ಅಂಶಗಳಿಲ್ಲ. ಕಳೆದ ವಾರ ತಿ. ನರಸೀಪುರದ ಮಲ್ಲಪ್ಪನ ಬೆಟ್ಟಕ್ಕೆ ಬಂದ ಯುವಕನ ಮೇಲೆ ದಾಳಿ ಮಾಡಿ ಆ ಯುವಕನನ್ನು ಕೊಂದಿದ್ದು ಒಂದು ಪ್ರಕರಣ ಮಾತ್ರ ವರದಿಯಾಗಿದೆ. ಇನ್ನುಳಿದಂತೆ ಸಣ್ಣಪುಟ್ಟ ಗಾಯಗಳಾಗಿರುವ ಪ್ರಕರಣಗಳು ಬಹಳಷ್ಟಿವೆ ಎನ್ನುತ್ತಾರೆ ಡಿಸಿಎಫ್ ಕಾರಿಕಾಳನ್.
ಇದನ್ನೂ ಓದಿ: ಮೈಸೂರು: ಯುವಕನ ಬಲಿ ಪಡೆದ ಬೆಟ್ಟದಲ್ಲೇ ಜೋಡಿ ಚಿರತೆ ಪ್ರತ್ಯಕ್ಷ