ಮೈಸೂರು:ಬಡವರ ದುಡಿಮೆ ಹಣವನ್ನು ಪೆಟ್ರೋಲ್, ಡೀಸೆಲ್ ರೂಪದಲ್ಲಿ ಸರ್ಕಾರ ಕಿತ್ತುಕೊಳ್ಳುತ್ತಿದ್ದು, ಇದೊಂದು ರಾಕ್ಷಸ ಸರ್ಕಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಳ ವಿರೋಧಿಸಿ ಇಂದು ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ನಗರದ ಆರ್ಟಿಒ ವೃತ್ತದ ಬಳಿ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರಕ್ಕೆ ನಕಲಿ ನೋಟುಗಳನ್ನು ಹಾಕಿ ಹಾಗೂ ಸಾಮಾನ್ಯ ಜನ ನೇಣು ಬಿಗಿದುಕೊಂಡಂತೆ ಅಣುಕು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು.
ರಾಕ್ಷಸರ ಸಂಹಾರ ಆದಂತೆ ಬಿಜೆಪಿ ಸರ್ಕಾರ ಸಂಹಾರ ಆಗಬೇಕು:
ಚಾಮುಂಡೇಶ್ವರಿಯಿಂದ ರಾಕ್ಷಸರು ಸಂಹಾರ ಆದಂತೆ, ಜನತೆ ದೇವರಿಂದ ಬಿಜೆಪಿ ಸರ್ಕಾರ ಸಂಹಾರ ಆಗಬೇಕು ಎಂದು ಪ್ರತಿಭಟನೆ ವೇಳೆ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಕಿಡಿಕಾರಿದರು.
ಮೋದಿ ಸರ್ಕಾರ ಎಲ್ಲರ ಕತ್ತು ಕೊಯ್ದು ದುಡಿಮೆ ಹಣ ಕಿತ್ತುಕೊಳ್ಳುತ್ತಿದೆ. ಪೆಟ್ರೋಲ್,ಡೀಸೆಲ್ ದರ ಏರಿಸಿ ಜನಸಾಮಾನ್ಯರನ್ನು ಅಧೋಗತಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಲಿ ಮಾಡುವವರು ಅರ್ಧ ಸಂಬಳವನ್ನ ಪೆಟ್ರೋಲ್ಗೆ ಖರ್ಚು ಮಾಡುವಂತಾಗಿದೆ. ಕೇಂದ್ರ ಸರ್ಕಾರ ಬಡವರ ರಕ್ತ ಹೀರಿ ಆಡಳಿತ ಮಾಡುತ್ತಿದೆ. ದುಡಿದ ದುಡ್ಡನ್ನು ಟ್ಯಾಕ್ಸ್ ರೂಪದಲ್ಲಿ ಕಿತ್ತುಕೊಳ್ಳುತ್ತಿದೆ. ಇಂತಹ ಸರ್ಕಾರವನ್ನ ಜನ ಸಂಹಾರ ಮಾಡಬೇಕು ಎಂದು ಕಿಡಿಕಾರಿದರು.
ದೇಶ ಕಟ್ಟಲು ಹಗಲು, ರಾತ್ರಿ, ದುಡಿಯುವ ಕಟ್ಟಡ ಕಾರ್ಮಿಕರು, ಮರಗೆಲಸ ಮಾಡುವವರು, ಕಾರು, ಆಟೋ ಚಾಲಕರು, ಹೂ ಮಾರುವವರು ಅವರೆಲ್ಲರೂ ಬದುಕಿದರೆ ದೇಶ ಬದುಕುವುದು, ಅವರೇ ದೇಶ ಕಟ್ಟುವವರು. ಅವರ ಬದುಕು ಮೂರಾಬಟ್ಟೆಯಾಗುತ್ತಿದೆ. ಅದರ ವಿರುದ್ಧ ನಮ್ಮ ಪ್ರತಿಭಟನೆ ಎಂದು ಎಂ.ಕೆ.ಸೋಮಶೇಖರ್ ತಿಳಿಸಿದರು.