ಮೈಸೂರು: ಕಬಿನಿಗೆ ಅಡ್ಡಲಾಗಿ ನಿರ್ಮಿಸಬೇಕಾದ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದ ಸುದ್ದಿ ಈಟಿವಿ ಭಾರತದಲ್ಲಿ ನಿನ್ನೆ ಬಿತ್ತರವಾಗಿತ್ತು. ಇಂದು ಉಸ್ತುವಾರಿ ಸಚಿವರು ಈ ಬಗ್ಗೆ ಸಿಎಂ ಜೊತೆ ಮಾತನಾಡಿದಾಗ ಸೇತುವೆ ಟೆಂಡರ್ಗೆ ಅಸ್ತು ಎಂದಿದ್ದಾರೆ.
ನಾನು ಎಚ್.ಡಿ.ಕೋಟೆ ಕ್ಷೇತ್ರದ ಪ್ರವಾಸ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ ಕಬಿನಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಬೇಕಿದ್ದ ಸೇತುವೆಯ ಕಾಮಗಾರಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಗ್ಗೆ ಗಮನಕ್ಕೆ ತಂದಿದ್ದಾರೆ. ಈ ಸೇತುವೆ ನಿರ್ಮಾಣದಿಂದ ಪ್ರವಾಹ ಬಂದಂತಹ ಸಂದರ್ಭದಲ್ಲಿ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಕಬಿನಿ ಜಲಾಶಯದ ಕೂಡು ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸುವ (ಕೊಲ್ಲೆಗೌಡನಹಳ್ಳಿ ವೃತ್ತದಿಂದ ಬೀದರಹಳ್ಳಿ ವೃತದವರೆಗೆ) ಕಾಮಗಾರಿಗೆ ಅನುಮೋದನೆ ನೀಡಬೇಕೆಂಬ ಬಗ್ಗೆ ನನ್ನ ಗಮನಕ್ಕೆ ತಂದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಸಂಬಂಧ ತಾವು ಸೇತುವೆ ನಿರ್ಮಾಣಕ್ಕೆ ಅನುಮೋದನೆ ಮತ್ತು ಅನುದಾನ ಕೊಡಬೇಕೆಂದು ಕೋರಲಾಗಿತ್ತು. ಸರ್ಕಾರಿ ಆದೇಶದ ಅನ್ವಯ ಕಬಿನಿ ಅಣೆಕಟ್ಟೆಯ ಕೆಳಭಾಗದಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯು 25 ಕೋಟಿ ರೂಪಾಯಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿ ಕಾಮಗಾರಿಯನ್ನು ಕೈಗೊಳ್ಳಲು ಟೆಂಡರ್ ಕರೆಯಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
- ಕಬಿನಿ ಜಲಾಶಯದ ಕೂಡು ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸುವ (ಕೊಲ್ಲೆಗೌಡನಹಳ್ಳಿ ವೃತ್ತದಿಂದ ಬೀದರಹಳ್ಳಿ ವೃತದವರೆಗೆ) 25.30 ಕೋಟಿ ರೂಪಾಯಿ ಕಾಮಗಾರಿಗೆ 2019-20ನೇ ಸಾಲಿನ ಪರಿಶಿಷ್ಟ ಜಾತಿ, ಪಂಗಡ ಉಪಯೋಜನೆ ಅಡಿಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಒದಗಿಸಲಾದ ಅನುದಾನದ ಅಡಿಯಲ್ಲಿ ಕೂಡಲೇ ಕಾಮಗಾರಿಗಳನ್ನು ಕೈಗೊಳ್ಳುವ ಪ್ರಸ್ತಾವನೆಗೆ ಅನುಮೋದನೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ.
ಇದನ್ನೂ ಓದಿ: ಆ.21 ರಂದು ಕಬಿನಿಗೆ ಸಿಎಂ ಬಾಗಿನ; ನೊಂದವರ ಕಣ್ಣೀರು ಒರೆಸುವರೇ ಬಿಎಸ್ವೈ
ಆ ಭಾಗದ ಜನರ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಭಿನಂದಿಸುತ್ತೇನೆ.
ಮೇಲ್ಕಂಡ ಎರಡೂ ಕಾಮಗಾರಿಗಳಿಗೂ ಕೂಡಾ ಟೆಂಡರ್ ಕರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.