ಮೈಸೂರು: ದಿವ್ಯಾಂಗರಿಗಾಗಿ ದಾರಿಯನ್ನು ನಿಖರವಾಗಿ ತಿಳಿಸುವ ಹಾಗೂ ಗುಂಡಿಗಳ ಬಗ್ಗೆ ಇತರೆ ಅಡಚಣೆಗಳ ಬಗ್ಗೆ ಮಾಹಿತಿ ನೀಡುವ ಬ್ಲೈಂಡ್ ಸ್ಟಿಕ್ ಅನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಂಶೋಧನೆ ಮಾಡಿದ್ದು, ಅದು ಹೇಗೆ ಕೆಲಸ ನಿರ್ವಹಿಸುತ್ತದೆ. ದಿವ್ಯಾಂಗರಿಗೆ ಯಾವ ರೀತಿ ಅನುಕೂಲವಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ 6ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಮೃತಿ ಬಾಳಿಗ, ಸ್ವಪ್ನ, ಶ್ರೇಯಸ್ ಹಾಗೂ ಯೋಗೇಶ್ ಗೌಡ ಎಂಬ ವಿದ್ಯಾರ್ಥಿಗಳು ಪ್ರಾಧ್ಯಾಪಕರಾದ ಗಿರಿಜಾಂಬ ಅವರ ಮಾರ್ಗದರ್ಶನದಲ್ಲಿ ಕಳೆದ 2 ತಿಂಗಳಿನಿಂದ ಈ ಬ್ಲೈಂಡ್ ಸ್ಟಿಕ್ ರೂಪಿಸಿದ್ದಾರೆ. ಈ ಸ್ಟಿಕ್ ಅಲ್ಟ್ರಾ ಸೋನಿಕ್ ಸೆನ್ಸಾರ್, ಅಡಿಯೋ, ಪ್ಲಾಸ್ಟಿಕ್ ಪೈಪ್ಸ್, ವೈಬ್ರೇಟರ್ ಬಳಸಿ ಕೇವಲ ಸಾವಿರದ ಐದುನೂರು ವೆಚ್ಚದಲ್ಲಿ ಈ ಬ್ಲೈಂಡ್ ಸ್ಟಿಕ್ (ಚತುರ ಕೋಲು)ಅನ್ನು ರೂಪಿಸಿದ್ದಾರೆ.
ದೃಷ್ಠಿ ದೋಷ ಇರುವವರು ನಡೆಯುವಾಗ ಗುಂಡಿ, ರಸ್ತೆಯ ಅಡೆತಡೆಗಳನ್ನು ಸ್ಟಿಕ್ ಗುರುತಿಸಿ ನಡೆಯಲು ಅನುಕೂಲ ಮಾಡಿಕೊಡುತ್ತದೆ. ಕಡಿಮೆ ವೆಚ್ಚದಲ್ಲಿ ತಯಾರಿಸಿರುವ ಈ ಸಾಧನ ಕಡಿಮೆ ವಿದ್ಯುತ್ ಬಳಸಿ ಚಾರ್ಜ್ ಮಾಡಬಹುದು.
ಕಾರ್ಯ ನಿರ್ವಹಣೆ ಹೇಗೆ?: ಅಲ್ಟ್ರಾ ಸೋನಿಕ್ ಸಂವೇದಕವನ್ನು ಸ್ಟಿಕ್ನ ಸಾಧನದ ಮುಖ್ಯ ಭಾಗದಲ್ಲಿ ಅಳವಡಿಸಿದ್ದು, ಇದು ಹೆಚ್ಚಿನ ಆವರ್ತದಲ್ಲಿ ವ್ಯಕ್ತಿಯ ನಾಡಿಗೆ ರವಾನಿಸುತ್ತದೆ. ಆದ್ದರಿಂದ, ಸುಲಭವಾಗಿ ಗುಂಡಿಗಳು, ಎದುರಿನಲ್ಲಿರುವ ವಸ್ತುಗಳ ಬಗ್ಗೆ ತಿಳಿಯಲಿದೆ. ಇದು ಬ್ಲೂಟೂತ್ ಮೂಲಕ ವಸ್ತುಗಳ ಇರುವಿಕೆಯನ್ನು ತಿಳಿಸುತ್ತದೆ. ಬೆಳಕಿನ ತೀವ್ರತೆಯನ್ನು ತಿಳಿಯುವ ಎಲ್.ಡಿ.ಆರ್ ಇದೆ. ಸ್ಟಿಕ್ ಇರುವ ಸ್ಥಳ ತಿಳಿಯಲು ಆರ್.ಎಫ್ ರಿಮೋಟ್ ಕೂಡಾ ಇದ್ದು ಬ್ಲೈಂಡ್ ಸ್ಟಿಕ್ ಅನ್ನು ಹಿಡಿದು ನಡೆಯುವ ದಿವ್ಯಾಂಗರಿಗೆ ಈ ಸ್ಟಿಕ್ನಲ್ಲಿ ಅಳವಡಿಸುವ ಸಾಧನಗಳಿಂದ ಹಳ್ಳ-ಗುಂಡಿಗಳು, ರಸ್ತೆ ಅಡಚಣೆಗಳ ಬಗ್ಗೆ ತಿಳಿಯಬಹುದಾಗಿದೆ.
'ನಾವು ಈ ಯೋಜನೆಗೆ ಸಂಬಂಧಿಸಿದ ಸಂಶೋಧನೆಗಳನ್ನು ಅವಲೋಕಿಸಿದಾಗ ಈ ಹಿಂದೆ ವಿನ್ಯಾಸಗೊಳಿಸಿದ್ದ ಸ್ಟಿಕ್ಗಳು ಭಾರವಾಗಿದ್ದವು. ಅದಕ್ಕೆ ಬೆಲೆ ಕೂಡ ಹೆಚ್ಚಿತ್ತು. ಇದರ ಬಗ್ಗೆ ತಿಳಿದು ನಾವು ಕಡಿಮೆ ವೆಚ್ಚದಲ್ಲಿ ಹಾಗೂ ಹಗುರವಾದ ಬ್ಲೈಂಡ್ ಸ್ಟಿಕ್ ಅನ್ನು ಕಂಡು ಹಿಡಿಯಲು ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ್ದೇವೆ' ಎಂದು ವಿದ್ಯಾರ್ಥಿ ಯೋಗೇಶ್ಗೌಡ ತಿಳಿಸಿದ್ದಾರೆ.
ಎಲ್ ಡಿ ಆರ್ ಅಳವಡಿಕೆ: ಈ ಬ್ಲೈಡ್ ಸ್ಟಿಕ್ಅನ್ನು ಅಭಿವೃದ್ಧಿಪಡಿಸಲು ತಂಡವು ಬ್ಲೂ ಟೂತ್ ಮೂಲಕ ಧ್ವನಿಯ ಔಟ್ಪುಟ್, ಅಲ್ಟ್ರಾ ಸಾನಿಕ್ ಸಂವೇದಕಗಳಿಂದ ಚಿತ್ರ ಸಂಸ್ಕರಣಾ ತಂತ್ರಗಳಿಗೆ ಗುಂಡಿಗಳ ಪತ್ತೆಯನ್ನು ಉನ್ನತಿಕರಿಸುವುದು, ಬೆಳಕಿನ ಪರಿಸ್ಥಿತಿಯನ್ನು ಸಂಗ್ರಹಿಸಲು ಎಲ್.ಡಿ.ಆರ್ ಅಳವಡಿಕೆ ಹಾಗೂ ಅಂಧರ ಊರುಗೋಲನ್ನು ಸ್ವತಃ ಪತ್ತೆಹಚ್ಚಲು ಆರ್.ಎಫ್ ರಿಮೋಟ್ ಅನ್ನು ಅಳವಡಿಸಲಾಗಿದೆ ಎಂದು ವಿದ್ಯಾರ್ಥಿಗಳು ವಿವರಿಸಿದ್ದಾರೆ.
ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ತನಿಖಾಧಿಕಾರಿಯಾಗಿ ಚಾಮರಾಜನಗರ ಎಎಸ್ಪಿ ನೇಮಕ