ಮೈಸೂರು: ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆ ಶುಭ ತುಲಾ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ಗೇಟ್ ಮೂಲಕ ಅರಮನೆ ಪ್ರವೇಶ ಮಾಡಿದವು.
6.30 ರಿಂದ 7.40 ರೊಳಗಿನ ಶುಭ ಲಗ್ನದಲ್ಲಿ ಅರಣ್ಯ ಭವನದ ಆವರಣದಲ್ಲಿ ಪೂಜೆ ಸಲ್ಲಿಸಿ ಅರಮನೆಗೆ ಬೀಳ್ಕೊಡಲಾಯಿತು. ಈ ಬಳಿಕ ಬೆಳಗ್ಗೆ 8.36 ರಿಂದ 9.11ರ ನಡುವಿನ ತುಲಾ ಲಗ್ನದಲ್ಲಿ ಗಜಪಯಣದ ಮೂಲಕ ಮೈಸೂರು ಅರಮನೆ ಮೈದಾನಕ್ಕೆ ಆನೆಗಳು ಪ್ರವೇಶ ಮಾಡಿವೆ.
ಇಲ್ಲಿನ ಜಯಮಾರ್ತಾಂಡ ದ್ವಾರದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಅರಣ್ಯಾಧಿಕಾರಿಗಳು ಪೂಜೆ ಸಲ್ಲಿಸಿ ಗಣಪಡೆ ಸ್ವಾಗತಿಸಿದರು. ಇಂದಿನಿಂದ ಅಕ್ಟೋಬರ್ 17 ರವರೆಗೆ ಅರಮನೆಯಲ್ಲಿ ವಾಸ್ತವ್ಯ ಹೂಡಲಿರುವ ಅಭಿಮನ್ಯು ನೇತೃತ್ವದ ಗಜಪಡೆ ಸೆ.19ರಿಂದ ತಾಲೀಮು ನಡೆಸಲಿದೆ.
ದಾರಿಯುದ್ದಕ್ಕೂ ಗಜಪಡೆ ವೀಕ್ಷಿಸಿದ ಸಾರ್ವಜನಿಕರು: ಅರಣ್ಯಭವನದಿಂದ ಹೊರಟ ಅಭಿಮನ್ಯು ನೇತೃತ್ವದ ವಿಕ್ರಮ, ಗೋಪಾಲಸ್ವಾಮಿ, ಧನಂಜಯ, ಕಾವೇರಿ, ಚೈತ್ರಾ, ಲಕ್ಷ್ಮಿ, ಅಶ್ವತ್ಥಾಮ ಆನೆಗಳು ಅಶೋಕಪುರಂ ರಸ್ತೆ ಮೂಲಕ ಬಲ್ಲಾಳ್ ವೃತ್ತ, ಜೆಎಲ್ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್ ಹೌಸ್, ಬಿಎನ್ ರಸ್ತೆ ಮೂಲಕ ಜಯಮಾರ್ತಾಂಡ ದ್ವಾರಕ್ಕೆ ನಡಿಗೆ ಮೂಲಕ ಆಗಮಿಸಿದವು. ಈ ವೇಳೆ, ಗಜಪಡೆಯನ್ನು ದಾರಿಯುದ್ದಕ್ಕೂ ಸಾರ್ವಜನಿಕರು ವೀಕ್ಷಣೆ ಮಾಡಿದರು.