ಮೈಸೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಾಗದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ಕೊರೊನಾ ವೈರಸ್ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದ್ದೇನೆ ಎಂದರು.
ಕಳೆದ 10 ದಿನಗಳಿಂದ ರಾಜ್ಯದಲ್ಲಿ ಕೊರೊನಾ ಹರಡುವಿಕೆ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇಂದು ಒಂದೇ ದಿನ 1.30 ಲಕ್ಷ ಜನರ ಪರೀಕ್ಷೆ ಮಾಡಲಾಗಿದೆ. ಕೊರೊನಾ ಪರೀಕ್ಷೆ ಹೆಚ್ಚಾದಂತೆ ಚಿಕಿತ್ಸೆ ನೀಡಲು ಕೂಡ ಇಲಾಖೆ ಸಜ್ಜಾಗಿದೆ. ಇದರಿಂದ ಕೊರೊನಾ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಜನವರಿ ವೇಳೆಯಲ್ಲಿ ಔಷಧಿ ಬಂದರೆ, ಜನರಿಗೆ ಕೊಡಲು ಸರ್ಕಾರ ಸಿದ್ದವಿದೆ. ಮುಂದಿನ ತಿಂಗಳ ಕಾಲ ಕೊರೊನಾ ಟೆಸ್ಟಿಂಗ್ ಹೆಚ್ಚಿಸಲಾಗುವುದು. ಸದ್ಯಕ್ಕೆ ಮಾಸ್ಕ್, ಸ್ಯಾನಿಟೈಸ್, ಸಾಮಾಜಿಕ ಅಂತರವೇ ಮದ್ದು ಎಂದು ತಿಳಿಸಿದರು.