ಮೈಸೂರು: ಎಲೆ ತೋಟದ ಬಳಿ ಮಧ್ಯರಾತ್ರಿ ನಡೆದ ಡಬಲ್ ಮರ್ಡರ್ ಬಗ್ಗೆ ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮಧು, ಡಿಸಿಪಿ ಪ್ರಕಾಶ್ ಗೌಡ ಅವರಿಗೆ ಮಾಹಿತಿ ನೀಡಿದ್ದಾರೆ.
ತಡರಾತ್ರಿ ನಡೆದ ಡಬಲ್ ಮರ್ಡರ್ ಹಿಂದಿನ ಕಥೆಯನ್ನು ಡಿಸಿಪಿ ಎದುರು ಹೇಳಿದ ಮಧು, 'ನೆನ್ನೆ ಭಾನುವಾರ ಅಲ್ವಾ ಸರ್. ಎಲ್ರು ಪಾರ್ಟಿ ಮಾಡೋಣಾ ಅಂದ್ರು. ನಾನು ನಮ್ಮ ಮನೆಯಲ್ಲಿಯೇ ಚಿಕನ್ ಮಾಡಿಸಿಕೊಂಡು, ಎಣ್ಣೆ ತೆಗೆದುಕೊಂಡು ಹೋಗಿದ್ದೆ. ಇದೇ ವೇಳೆ ಜಮೀನು ವಿಷಯಕ್ಕೆ ಸಣ್ಣ ಗಲಾಟೆ ನಡೀತು. ಇಬ್ಬರನ್ನ ಕೊಚ್ಚಿ ಕೊಲೆ ಮಾಡಿದ್ರು. ನಾನು ತಪ್ಪಿಸಿಕೊಂಡು ಓಡಿ ಹೋದೆ' ಎಂದಿದ್ದಾನೆ.
ನೆನ್ನೆ ಕಿರಣ್, ಕಿಶನ್, ಮಧು ಹಾಗೂ ಹಲವು ಗೆಳೆಯರು ತಡರಾತ್ರಿವರೆಗೆ ಎಲೆತೋಟದ ಬಳಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಾತು ಆರಂಭವಾಗಿ ನಂತರ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಮೊದಲೇ ಸ್ಕೆಚ್ ಹಾಕಿ ಬಂದಿದ್ದ ಸ್ವಾಮಿ ಹಾಗೂ ಅವರ ಬೆಂಬಲಿಗರು ಕಿರಣ್, ಕಿಶನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಧುವಿನ ಮೇಲೂ ಹಲ್ಲೆಗೆ ಯತ್ನ ನಡೆಸಿದ್ದಾರೆ. ಆದರೆ ಮಧು ಅದೃಷ್ಟ ಚೆನ್ನಾಗಿದ್ದಿದ್ದರಿಂದ ಆತನ ಬಲಗೈಗೆ ಪೆಟ್ಟುಬಿದ್ದ ತಕ್ಷಣ ಓಡಿ ಹೋಗಿದ್ದಾನೆ.
ಕುಡಿದ ಮತ್ತಿನಲ್ಲಿ ಕುಳಿತಲ್ಲಿಯೇ ಕುಳಿತಿದ್ದ ಕಿರಣ್ ಹಾಗೂ ಕಿಶನ್ ಅವರನ್ನ ಮನಸೋ ಇಚ್ಛೆ ಕತ್ತರಿಸಿ ಕೊಲೆ ಮಾಡಿದ್ದಾರೆ. ಘಟನೆ ಬಳಿಕ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮಧು ಚಿಕಿತ್ಸೆ ಪಡೆಯುತ್ತಿರುವುದಾಗಿ ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ ಅವರ ಬಳಿ ವಿವರಿಸಿದ್ದಾನೆ.
ಓದಿ: ಸುಟ್ಟು ಕರಕಲಾದ ಶಾಪಿಂಗ್ ಕಾಂಪ್ಲೆಕ್ಸ್: ಅಂದಾಜು 10 ಕೋಟಿ ನಷ್ಟ
ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಕಿರಣ್ ಹಾಗೂ ಕಿಶನ್ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಇಬ್ಬರ ಹತ್ಯೆಯಿಂದಾಗಿ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದು ಮಾಧ್ಯಮದವರ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ಅಲ್ಲದೇ, ಮಾಧ್ಯಮದವರ ಚಿತ್ರೀಕರಣಕ್ಕೂ ಕೂಡ ಅಡ್ಡಿಪಡಿಸಿದ್ದಾರೆ. ಸದ್ಯ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಕಿರಣ್, ಕಿಶನ್ ಕುಟುಂಬದವರು, ಸ್ನೇಹಿತರ ದಂಡು ಬೀಡುಬಿಟ್ಟಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ. ಸ್ಥಳದಲ್ಲಿ ಎರಡು ಕೆ.ಎಸ್.ಆರ್.ಪಿ ವಾಹನದಲ್ಲಿ ಪೊಲೀಸರು ಗಸ್ತು ಕಾಯುತ್ತಿದ್ದು, ಘಟನೆಯಿಂದ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ.