ಮೈಸೂರು: ಮೂರು ಜನ ಉಪ ಮುಖ್ಯಮಂತ್ರಿಗಳ ನೇಮಕ ಮಾಡುವ ವಿಚಾರದಲ್ಲಿ ರಾಜಣ್ಣ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿಲ್ಲ. ಅವರು ನಮ್ಮ ಲೀಡರ್, ನಮ್ಮ ಪಕ್ಷದ ಅಧ್ಯಕ್ಷರು. ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಸಚಿವ ಕೆ.ವೆಂಕಟೇಶ್ ಮಾಧ್ಯಮದವರ ಪ್ರಶ್ನೆಗೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಇದೇ ತಿಂಗಳ 26 ರಂದು ಮುಖ್ಯಮಂತ್ರಿಗಳು ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉತ್ತನಹಳ್ಳಿ ಬಳಿ ನೂತನ ಪಶು ಚಿಕಿತ್ಸಾಲಯ ಉದ್ಘಾಟನಾ ಸಮಾರಂಭದಲ್ಲಿ ಪಶು ಸಖಿ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂಬುದರ ಬಗ್ಗೆ ಸಚಿವರು ಮಾಹಿತಿ ನೀಡಿದರು.
ನಂತರ ಮಾತನಾಡಿದ ಅವರು ಕಾಂಗ್ರೆಸ್ನಲ್ಲಿ ಮೂರು ಜನ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ಸಚಿವ ರಾಜಣ್ಣ ಹೇಳಿಕೆಗೆ, ಅದು ಅವರ ವೈಯಕ್ತಿಕ ಅಭಿಪ್ರಾಯ. ಯಾವ ದೃಷ್ಟಿ ಇಟ್ಟುಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಈ ವಿಚಾರ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಪಕ್ಷಕ್ಕೆ ಅನುಕೂಲವಾಗುವುದಾದರೆ ಹೈಕಮಾಂಡ್ ಅದನ್ನು ಮಾಡುತ್ತಾರೆ. ಡಿ.ಕೆ.ಶಿವಕುಮಾರ್ ಮೇಲೆ ಯಾವುದೇ ಟಾರ್ಗೆಟ್ ಇಲ್ಲ. ಅವರು ನಮ್ಮ ಲೀಡರ್ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ ಎಂದರು.
ಮಂತ್ರಿಗಳು ಹೇಳಿಕೆ ಕೊಡುವುದು ತಪ್ಪೇನಿಲ್ಲ. ಎಲ್ಲರಿಗೂ ಪಕ್ಷ ಉಳಿಯಬೇಕು, ಅಧಿಕಾರ ಉಳಿಯಬೇಕು ಎಂಬ ಹಂಬಲ ಇರುತ್ತದೆ. ಪಕ್ಷ ಮತ್ತು ಅಧಿಕಾರ ಕಳೆದುಕೊಳ್ಳಲು ಯಾರೂ ತಯಾರಿಲ್ಲ. ಎಲ್ಲರಿಗೂ ಆಸೆ ಇರುತ್ತದೆ ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದರು.
'ಇಬ್ಬರಿಗೂ ಮೈತ್ರಿ ಬೇಕಿತ್ತು': ಬಿಜೆಪಿ ಮತ್ತು ಜೆಡಿಎಸ್ನ ಮೈತ್ರಿ ಹೊಸದೇನಲ್ಲ. 2013ರಲ್ಲೂ ಒಳ ಒಪ್ಪಂದ ಮಾಡಿಕೊಂಡಿದ್ದರು. ಕಳೆದ ಬಾರಿಯೂ ಒಳ ಒಪ್ಪಂದ ಆಗಿತ್ತು. ಇಬ್ಬರು ಮೊದಲು ಒಳಗೊಳಗೆ ಒಪ್ಪಂದ ಮಾಡಿಕೊಂಡಿದ್ದರು. ಈಗ ಬಹಿರಂಗವಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಅಷ್ಟೇ. ಚುನಾವಣೆಗೆ ಇನ್ನೂ 6 ತಿಂಗಳು ಇದೆ. ಜನ ಏನು ಮಾಡುತ್ತಾರೋ ನೋಡೋಣ ಎಂದರು.
400 ಪಶುವೈದ್ಯರ ನೇಮಕಕ್ಕೆ ಸಿದ್ಧತೆ: ಪಶು ವೈದ್ಯ ಇಲಾಖೆಯಲ್ಲಿ ಒಟ್ಟು 18 ಸಾವಿರ ಹುದ್ದೆಗಳಿದ್ದು, 9 ಸಾವಿರ ಹುದ್ದೆಗಳಲ್ಲಿ ಮಾತ್ರ ನೌಕರರಿದ್ದಾರೆ. ಉಳಿದ 9 ಸಾವಿರ ಹುದ್ದೆಗಳು ಖಾಲಿ ಇವೆ. ಆದರೂ ಕೊರತೆಯ ನಡುವೆ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ. ಈಗಾಗಲೇ 250 ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಿದೆ. ಇದೇ ತಿಂಗಳ 26 ರಿಂದ ಅವರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇದರ ಜೊತೆಗೆ 400 ಜನ ಪಶು ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲು ಹಣಕಾಸಿನ ಇಲಾಖೆ ಒಪ್ಪಿಗೆ ನೀಡಿದೆ. ಕೆಪಿಎಸ್ಸಿ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪಶು ಸಖಿಯರ ನೇಮಕಾತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಇರುವ ಆಶಾ ಕಾರ್ಯಕರ್ತರ ಮಾದರಿಯಲ್ಲಿ ಪಶು ವೈದ್ಯ ಇಲಾಖೆಯಲ್ಲಿ ರೈತರು ಮತ್ತು ಇಲಾಖೆ ನಡುವೆ ಕೆಲಸ ಮಾಡಲು 5962 ಪಶು ಸಖಿಯರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಅವರು ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಒಬ್ಬೊಬ್ಬ ಹೆಣ್ಣು ಮಕ್ಕಳನ್ನು ಪಶು ಸಖಿಯರೆಂದು ಆಯ್ಕೆ ಮಾಡಿ, 18 ದಿನ ತರಬೇತಿ ನೀಡಿ, ಅವರನ್ನು ಗ್ರಾಮಪಂಚಾಯ್ತಿ ಮಟ್ಟದ ಗ್ರಾಮಗಳಲ್ಲಿ ಪಶು ಸಂಗೋಪನಾ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಲು ಈ ಪಶು ಸಖಿಯರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 26ರ ಮಂಗಳವಾರ ಮುಖ್ಯಮಂತ್ರಿಗಳು ಮೈಸೂರಿನ ಉತ್ತನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿರುವುದರಿಂದ, ರಾಜ್ಯದಿಂದ ತಮಿಳುನಾಡು ಮತ್ತು ಕೇರಳಕ್ಕೆ ಮೇವು ಸಾಗಾಣಿಕೆಯನ್ನು ರದ್ದು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಸುಳ್ಳು ಪೊಳ್ಳುಗಳ ಸೌಧದ ಮೇಲೆ ನಿಂತಿರುವ ರಾಜ್ಯ ಕಾಂಗ್ರೆಸ್‌ಗೆ ಅಸತ್ಯವೇ ಅಷ್ಟೈಶ್ವರ್ಯ: ಜೆಡಿಎಸ್