ಮೈಸೂರು: ಚಿರತೆ ಸೆರೆಗಾಗಿ ಮುಖ್ಯಮಂತ್ರಿಗಳು ಹೈ ಪವರ್ ಕಮಿಟಿ ಮೀಟಿಂಗ್ ಮಾಡಿದ್ದರು. ನರಭಕ್ಷಕ ಚಿರತೆ ಸೆರೆಗಾಗಿ ಕಾರ್ಯಾಚರಣೆ ತೀವ್ರಗೊಂಡ ಬೆನ್ನಲ್ಲೇ ಮುಂಜಾನೆ ಚಿರತೆ ಸೆರೆಯಾಗಿದೆ. ಈಗ ಆ ಚಿರತೆಯನ್ನು ಕೊಂದುಹಾಕಿ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ನೋಡೋಣ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ವಹಿಸುತ್ತೇವೆ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಟಿ. ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದ 11 ವರ್ಷದ ಬಾಲಕನನ್ನು ಸ್ಥಳದಲ್ಲೇ ಕೊಂದು ಹಾಕಿದ್ದ, ನರಹಂತಕ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಬೆಳಗ್ಗಿನ ಜಾವ ಬಿದ್ದಿದ್ದು, ಈ ಚಿರತೆಯಿಂದ ಡಿಎನ್ಎ ಪರೀಕ್ಷೆಗಾಗಿ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ನರಹಂತಕ ಚಿರತೆಯನ್ನು ಕಾಡಿಗೆ ಬಿಡದೇ ಮೈಸೂರಿನ ಪ್ರಾಣಿ ಪುನರ್ವಸತಿ ಕೇಂದ್ರ ಅಥವಾ ಬನ್ನೇರುಘಟ್ಟಕ್ಕೆ ಬಿಡಲಾಗುವುದು ಎಂದು ಮೈಸೂರು ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ದೂರವಾಣಿ ಮೂಲಕ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಕಳೆದ ಶನಿವಾರ ಅಂಗಡಿಗೆ ಬಿಸ್ಕೆಟ್ ತರಲು ಹೊಗಿದ್ದ ಹೊರಳ ಹಳ್ಳಿ ಗ್ರಾಮದ ಜಯಂತ್ ಎಂಬ ಬಾಲಕನನ್ನು ಚಿರತೆಯೊಂದು ಹಿಡಿದುಕೊಂಡು ಒಂದು ಕಿಲೋಮೀಟರ್ ದೂರ ಮೃತ ದೇಹವನ್ನು ಎಳೆದುಕೊಂಡು ಹೋಗಿ, ದೇಹದ ಅರ್ಧ ಭಾಗ ತಿಂದು ಪರಾರಿಯಾಗಿತ್ತು. ಬಾಲಕನ ಅರ್ಧ ದೇಹ ಇದ್ದ ಸ್ಥಳದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಕ್ಯಾಮೆರಾದಲ್ಲಿ ನಿನ್ನೆ ಸಂಜೆ ಚಿರತೆ ಸೆರೆಯಾಗಿದ್ದು, ಅದೇ ಸ್ಥಳದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ನರಹಂತಕ ಚಿರತೆ ಬಿದ್ದಿದೆ.
ಚಿರತೆಯನ್ನು ಕೊಲ್ಲುವಂತೆ ಗ್ರಾಮಸ್ಥರ ಪಟ್ಟು: ಬೆಳಗ್ಗಿನ ಜಾವ ಹೊರಳಹಳ್ಳಿ ಗ್ರಾಮದ ಹೊರವಲಯದಲ್ಲಿ ಬೋನಿಗೆ ಬಿದ್ದ ವಿಚಾರ ತಿಳಿದು ಅರಣ್ಯ ಇಲಾಖೆ ಸ್ಥಳಕ್ಕೆ ಹೋಗುವ ಹೊತ್ತಿಗೆ ಗ್ರಾಮಸ್ಥರು ಆಗಮಿಸಿದ್ದರು. ಬೋನಿಗೆ ಬಿದ್ದ ಚಿರತೆಯನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲುವಂತೆ ಜನರು ಗಲಾಟೆ ಮಾಡುತ್ತಿದ್ದು, ಗ್ರಾಮಸ್ಥರನ್ನು ಅರಣ್ಯ ಇಲಾಖೆಯವರು ಸಮಾಧಾನ ಪಡಿಸಲು ಸಾಧ್ಯವಾಗದ ಕಾರಣ, ಸ್ಥಳಕ್ಕೆ ಪೊಲೀಸರು ಆಗಮಿಸಿದ ಮೇಲೆ ಚಿರತೆಯನ್ನು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಚಿರತೆಗೆ ಡಿಎನ್‌ಎ ಪರೀಕ್ಷೆ: ಬೋನಿಗೆ ಬಿದ್ದ ಐದು ವರ್ಷದ ಗಂಡು ಚಿರತೆಯ ಕೂದಲು, ರಕ್ತದ ಮಾದರಿ, ಪಾಲಿಕಲ್ಸ್ ಮಾದರಿಗಳನ್ನು ಪಡೆಯಲಾಗಿದೆ. ಇದನ್ನು ಪ್ರಯೋಗಾಲಾಯಕ್ಕೆ ಕಳುಹಿಸಲಾಗಿದೆ. ಜೊತೆಗೆ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಮೃತದೇಹದ ಮೇಲೆ ಸಿಕ್ಕ ಕೂದಲುಗಳು ಹಾಗೂ ಮೃತ ಬಾಲಕನ ಮರಣೊತ್ತರ ಪರೀಕ್ಷೆಯನ್ನು ಚಿರತೆಯ ಡಿಎನ್ಎ ಪರಿಕ್ಷೆ ಜೊತೆಗೆ ಹೋಲಿಕೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ಮಾಲತಿ ಪ್ರಿಯ ತಿಳಿಸಿದರು.
ಸೆರೆ ಸಿಕ್ಕ ಚಿರತೆಯನ್ನು ಕಾಡಿಗೆ ಬಿಡುವುದಿಲ್ಲ: ಬೋನಿಗೆ ಬಿದ್ದ ಚಿರತೆಯನ್ನು ಮತ್ತೆ ಕಾಡಿಗೆ ಬಿಡುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಚಿರತೆಯನ್ನು ಮೈಸೂರು ಮೃಗಾಲಯದ ಅಧೀನದಲ್ಲಿರುವ ಕೂರ್ಗಳ್ಳಿ ಪ್ರಾಣಿ ಪುನರ್ವಸತಿ ಕೇಂದ್ರ ಅಥವಾ ಬನ್ನೇರುಘಟ್ಟಕ್ಕೆ ಸ್ಥಳಾಂತರಿಸುವ ಬಗ್ಗೆ ಮೇಲಾಧಿಕಾರಿಗಳ ಸೂಚನೆಗೆ ಕಾಯಲಾಗುತ್ತಿದೆ. ಅವರ ಸೂಚನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಲತಿ ಪ್ರಿಯ ಮಾಹಿತಿ ನೀಡಿದರು.
ಇದನ್ನೂ ಓದಿ: ಮೈಸೂರು: ಬಾಲಕನ ಬಲಿ ಪಡೆದ ಚಿರತೆ ಬೋನಿನಲ್ಲಿ ಸೆರೆ