ಮೈಸೂರು: ಭದ್ರಾ ಮೇಲ್ದಂಡೆ ಯೋಜನೆಗೆ 5360 ಕೋಟಿ ಅನುದಾನ ಪ್ರಕಟವಾಗಿರುವುದು ಸ್ವಾಗತಾರ್ಹ. ಈ ಯೋಜನೆ ಬರಪಿಡಿತ ಪ್ರದೇಶದ ಜಿಲ್ಲೆಗಳಿಗೆ ಹೆಚ್ಚು ಅನುಕೂಲಕರವಾಗಿ ಮತ್ತು ತುರ್ತಾಗಿ ಕಾರ್ಯಗತವಾಗಬೇಕು. ಆದರೆ, ಬಡ್ಡಿ ರಹಿತ ಸಾಲ ನೀಡುವ ಕೃಷಿ ಸಾಲ ನೀತಿಯ ಬಗ್ಗೆ ಯಾವುದೇ ನಿರ್ಧಾರ ಬಂದಿಲ್ಲ. ಹಾಗಾಗಿ, ಕೃಷಿ ಕ್ಷೇತ್ರಕ್ಕೆ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡಿರುವುದು, ಬಡವರಿಗೆ ಒಂದು ವರ್ಷ ಉಚಿತ ಆಹಾರ ವಿತರಣೆ ಮತ್ತು ಸಿರಿಧಾನ್ಯಗಳ ಉತ್ಪಾದನೆಗಳಿಗೆ ಹೆಚ್ಚು ಒತ್ತು ನೀಡಿರುವುದು ಉತ್ತಮ ಬೆಳವಣಿಗೆ. ಈ ಬಜೆಟ್ ಮಧ್ಯಮ ವರ್ಗಕ್ಕೆ ಸಹಕಾರಿಯಾಗಿದೆ. ಆದರೆ, ಕೃಷಿ ಕ್ಷೇತ್ರಕ್ಕೆ ಬೇಕಾದಂತಹ ಕನಿಷ್ಠ ಬೆಂಬಲ ಬೆಲೆಗೆ ಸಂಬಂಧ ಪಟ್ಟಂತೆ ಯಾವುದೇ ಸ್ಪಷ್ಟವಾದದಂತಹ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿಲ್ಲ. ರೈತರ ಸಾಲ ನೀತಿ, ರೈತರ ಮಕ್ಕಳು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಒಲಸೆ ಹೋಗುವಂತ ಸನ್ನಿವೇಶವನ್ನು ತಡೆಗಟ್ಟಲು ಬೇಕಾದಂತಹ ಯಾವುದೇ ಯೋಜನೆಯನ್ನ ಈ ಬಜೆಟ್ನಲ್ಲಿ ಮಂಡನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಕೃಷಿ ವಲಯಕ್ಕೆ ಕೃತಕ ಬುದ್ಧಿಮತ್ತೆಯ ಅವಶ್ಯಕತೆ ಇಲ್ಲ: ಕೇಂದ್ರ ಬಜೆಟ್ ಸಂಬಂಧ ಪ್ರತಿಕ್ರಿಯೆ ನೀಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, 2023-24ನೇ ಸಾಲಿನ ಕೇಂದ್ರದ ಬಜೆಟ್ ಕೃಷಿ ಪೂರಕವಲ್ಲ. ಇದು ಕೇವಲ ಕಾರ್ಪೋರೇಟ್ ವಲಯಕ್ಕೆ ಅನುಕೂಲ ಮಾಡಿಕೊಡುವ ಬಜೆಟ್ ಎಂದರು.
ಕೃಷಿ ವಲಯಕ್ಕೆ ಕೃತಕ ಬುದ್ಧಿಮತ್ತೆಯ ಅವಶ್ಯಕತೆ ಇಲ್ಲ. ರೈತರು ಕೃಷಿ ವಿಜ್ಞಾನಿಗಳಾಗಿದ್ದಾರೆ. ಅವರಿಗೆ ಬೇಕಾಗಿರುವುದು ಉತ್ತೇಜನವೇ ಹೊರತು ಕೃತಕ ಬುದ್ಧಿಮತ್ತೆ ಅಲ್ಲ. ಈಗಾಗಲೇ ಹತ್ತಿ ಕ್ಷೇತ್ರದಲ್ಲಿ ಇದರ ಅನ್ವಯದಿಂದ ದುಷ್ಟ ಪರಿಣಾಮಗಳಾಗಿವೇ ಹೊರತು ಒಳ್ಳೆಯದಾಗಿಲ್ಲ. ರೈತರ ಆದಾಯ ಹೆಚ್ಚಿಸುವ ಹಾಗೂ ಕೃಷಿಕರ ಭದ್ರತೆಗೆ ಯಾವುದೇ ಕಾರ್ಯಕ್ರಮವನ್ನು ಘೋಷಣೆ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ ಎಂದರು.
ಕೃಷಿ ವಿರೋಧಿ, ರೈತರನ್ನು ಮರೆತಿರುವ ಬಜೆಟ್ : ಕೃಷಿ ಕ್ಷೇತ್ರಕ್ಕೆ 20 ಲಕ್ಷ ಕೋಟಿದ್ದಾರೆ, ಅದು ಯಾವುದಕ್ಕೂ ಸಾಲುವುದಿಲ್ಲ, ಕೃಷಿಕರಿಗೆ ಇನ್ನೂ ಹೆಚ್ಚು ಒತ್ತು ನೀಡಬೇಕಿತ್ತು, ಕೃಷಿ ಸಾಲದಲ್ಲಿ ಶೂನ್ಯ ಬಡ್ಡಿದರ ನೀಡಬೇಕಾಗಿತ್ತು. ಮಧ್ಯಮ ವರ್ಗಗಳ ಅಭಿವೃದ್ಧಿಯ ಬಗ್ಗೆ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ: ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ ಬೊಮ್ಮಾಯಿ, ಕಾರಜೋಳ