ಮೈಸೂರು: ದಿವ್ಯಾಂಗರು ದೇವರ ಮಕ್ಕಳಾಗಿದ್ದು, ಇವರನ್ನು ನಾವು ವಿಶೇಷವಾಗಿ ಗೌರವ ನೀಡಿ ನೋಡಿಕೊಳ್ಳಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ದಿವ್ಯಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಅಧಿಕಾರಿತಾ ಶಿಬಿರ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಜೆಟ್ ನಲ್ಲಿ ವಿಕಲಚೇತನರಿಗೆ ಹೆಚ್ಚಿನ ಅನುದಾನ: ದಿವ್ಯಾಂಗರಿಗೆ ಮನಸ್ಸಿನ ಕೊರತೆ ಆಗಬಾರದು. ಒಂದು ಅಂಗ ವೈಕಲ್ಯವಾಗಿದ್ದರೆ ಬೇರೆ ಚಟುವಟಿಕೆಯಲ್ಲಿ ಹೆಚ್ಚಿನ ಶಕ್ತಿ ಹೊಂದಿರುತ್ತಾರೆ. ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ಮಿತಿ ಇಲ್ಲ. ಅಗತ್ಯ ಸಲಕರಣೆಗಳನ್ನು ವಿತರಿಸಬಹುದು. ನಾನು ಅಧಿಕಾರಕ್ಕೆ ಬಂದ ತಕ್ಷಣ ವಿಕಲಚೇತನರಿಗೆ ಮಾಶಾಸನ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಇದೇ ರೀತಿ ಕಾರ್ಯಕ್ರಮಗಳನ್ನು ಮಾಡಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುವುದು. ಬಜೆಟ್ನಲ್ಲಿ ವಿಕಲಚೇತನರಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಇದರ ಪ್ರಯೋಜನ ವಿಕಲಚೇತನರಿಗೆ ತಲುಪಬೇಕು. ಎಲ್ಲಾ ವರ್ಗದ ಜನ ಅಭಿವೃದ್ಧಿ ಆಗಬೇಕು. ಆಗ ಸಮಾಜ ಅಭಿವೃದ್ಧಿ ಆಗುತ್ತದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ : ಅಧಿಕಾರ ದಾಹಕ್ಕೆ ಕಾಂಗ್ರೆಸ್ನವರು ಹುಚ್ಚರಾಗಿದ್ದಾರೆ: ಕಟೀಲ್ ವಾಗ್ದಾಳಿ
ಮಾನವೀಯ ಸೇವೆಗೆ ಸಂಬಂಧಿಸಿದ ಕಾರ್ಯಕ್ರಮ: ಚಾಮರಾಜನಗರ ಲೋಕಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್ ಅವರು ಮಾತನಾಡಿ, ಅಲಿಂಕೊ ಸಂಸ್ಥೆಯಿಂದ ವಿಕಲಚೇತನರಿಗೆ ಕೃತಕ ಅಂಗಾಂಗಳ ಜೋಡಣೆಯನ್ನು ಮಾಡುತ್ತಾ ಬಂದಿದೆ. ಇದೊಂದು ಮಾನವೀಯ ಸೇವೆಗೆ ಸಂಬಂಧಿಸಿದ ಕಾರ್ಯಕ್ರಮ. ದೇಶದ 68 ಲೋಕಸಭಾ ಕ್ಷೇತ್ರಗಳಲ್ಲಿ ಇದೇ ರೀತಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಡಾ. ವಿಷ್ಣುವರ್ಧನ್ ಇಡೀ ಕರುನಾಡು ಮೆಚ್ಚಿದ ಹೃದಯವಂತ: ಸಿಎಂ ಬಸವರಾಜ ಬೊಮ್ಮಾಯಿ
1.5 ಕೋಟಿ ವೆಚ್ಚದಲ್ಲಿ ಸಾಧನ ಸಲಕರಣೆಗಳ ವಿತರಣೆ: ಕರ್ನಾಟಕದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಆಯ್ಕೆಯಾಗಿದೆ. ಇದು ನಮ್ಮ ಸುದೈವ. ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ವಿಕಲಚೇತನರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ. ಚಾಮರಾಜನಗರದಲ್ಲಿ 1690 ವಿಕಲಚೇತನರಿಗೆ ವಿತರಿಸಲಾಗಿದೆ. ಇಂದು ನಂಜನಗೂಡಿನಲ್ಲಿ 1691 ಜನರಿಗೆ 1.5 ಕೋಟಿ ವೆಚ್ಚದಲ್ಲಿ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಸಂಸದರು ಹೇಳಿದರು.
ಇದನ್ನೂ ಓದಿ : ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಬಿಜೆಪಿ ಮಾಜಿ ಶಾಸಕ ಬಸವರಾಜ್ ಮಂಡಿಮಠ
ವಿಕಲಚೇತನರಿಗೆ ಹೆಚ್ಚಿನ ಅನುಕೂಲ ಆಗುತ್ತದೆ: ಜಿಲ್ಲಾಧಿಕಾರಿಗಳಾದ ಡಾ ಕೆ ವಿ ರಾಜೇಂದ್ರ ಅವರು ಮಾತನಾಡಿ, 1500 ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆಗಳ ವಿತರಣೆ ನಡೆಯುತ್ತಿದೆ. ಇದರಿಂದ ವಿಕಲಚೇತನರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಕೃತಕ ಅಂಗಾಂಗಳ ಜೋಡಣೆಯನ್ನು ಮಾಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಹರ್ಷವರ್ಧನ್, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ ಕೋಟೆ ಶಿವಣ್ಣ, ಕಾವೇರಿ ನೀರಾವರಿ ನಿಗಮದ ಅಧ್ಯಕ್ಷ ನಿಜಗುಣ, ನಗರಸಭಾ ಉಪಾಧ್ಯಕ್ಷೆ ನಾಗಮಣಿ, ಪ್ರಾದೇಶಿಕ ಆಯುಕ್ತರಾದ ಬಿ ಜಿ ಪ್ರಕಾಶ್, ಜಿ ಪಂ ಸಿಇಒ ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಆರ್. ಲೋಕನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ: ಮುಖ್ಯಮಂತ್ರಿ ಚಂದ್ರು