ಮೈಸೂರು: ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ ದೃವನಾರಾಯಣ್ ಅಂತಿಮ ದರ್ಶನವನ್ನು, ಹಲವು ಗಣ್ಯರು ಹಾಗೂ ಆಪಾರ ಅಭಿಮಾನಿಗಳು ಪಡೆದರು. ನಾಳೆ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ದೃವನಾರಾಯಣ್ ಅವರ ಅಂತಿಮ ದರ್ಶನಕ್ಕೆ ವಿಜಯನಗರದ ನಿವಾಸಕ್ಕೆ ಜನಸಾಗರವೇ ಹರಿದು ಬಂದಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾವಣಗೆರೆಯ ಪ್ರಜಾಧ್ವನಿ ಯಾತ್ರೆಯನ್ನು ರದ್ದುಗೊಳಿಸಿ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ, ಆಪ್ತ ಸ್ನೇಹಿತನ ಅಂತಿಮ ದರ್ಶನ ಪಡೆದು, ದೃವನಾರಾಯಣ್ ನಿಧನದಿಂದ ಆಘಾತವಾಗಿದೆ, ಇವರ ನಿಧನದ ನೋವನ್ನು ತಡೆದುಕೊಳ್ಳಲು ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಜನಪ್ರಿಯ ಮಾಜಿ ಶಾಸಕರು, ಸಂಸದರೂ, ಕಾಂಗ್ರೆಸ್ ಮುಖಂಡರೂ ಆಗಿದ್ದ ಆರ್. ಧ್ರುವನಾರಾಯಣ್ ಅವರ ಅನೀರಿಕ್ಷಿತ ಮರಣ ಆಘಾತವನ್ನುಂಟು ಮಾಡಿದೆ. ಅವರು ಶ್ರೀಮಠದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಶ್ರೀಮಠದ ಅಭಿಮಾನಿಗಳಾಗಿದ್ದರು. ಇವರ ಅಗಲುವಿಕೆಯಿಂದ ರಾಜ್ಯ ಒಬ್ಬ ನಾಯಕನನ್ನು ಕೆಳದುಕೊಂಡಿದೆ. ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟಂಬ ವರ್ಗದವರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇವೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸಿದ್ದರಾಮಯ್ಯ, ಸುತ್ತೂರು ಶ್ರೀ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಸಚಿವ ಸೋಮಣ್ಣ, ಶಾಸಕ ಮಹೇಶ್, ಯತೀಂದ್ರ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.
ನೆಚ್ಚಿನ ನಾಯಕನ ನೋಡಲು ಜನಸಾಗರ: ಬೆಳ್ಳಂಬೆಳಗ್ಗೆ ಹೃದಯಾಘಾತದಿಂದ ನಿಧನರಾದ ದೃವನಾರಾಯಣ್ ಪಾರ್ಥಿವ ಶರೀರವನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ, ಸಾಂಪ್ರದಾಯಿಕವಾಗಿ ಕುಟುಂಬದವರು ಪೂಜೆ ಸಲ್ಲಿಸಿದರು. ಆನಂತರ ಸಾರ್ವಜನಿಕರ ದರ್ಶನಕ್ಕೆ ಮನೆ ಮುಂದೆ ಇಡಲಾಯಿತು. ಅಲ್ಲಿಗೆ ಗಣ್ಯರು, ಸಾವಿರಾರು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬಂದು ಅಂತಿಮ ದರ್ಶನ ಪಡೆದರು.
ಅಲ್ಲಿಂದ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕಚೇರಿಗೆ ತರಲಾಯಿತು. ಇಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಧ್ವಜವಂದನಾ ಗೌರವ ಸಲ್ಲಿಸಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸಾರ್ವಜನಿಕರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಡಿ.ಕೆ.ಶಿವಕುಮಾರ್ ಅಂತಿಮ ದರ್ಶನ ಪಡೆಯಲು ಬರಲಿದ್ದಾರೆ ಎನ್ನಲಾಗಿದೆ.
ಹೃದಯಾಘಾತದ ಬಗ್ಗೆ ವೈದ್ಯರು ಹೇಳಿದ್ದೇನು: ಶನಿವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದಾಗ, ದ್ರವನಾರಯಣ ಅವರು ಕೊಮಾ ಸ್ಥಿತಿಗೆ ಹೋಗಿದ್ದರು. ಹೃದಯಾಘಾತದ ಸಂದರ್ಭದಲ್ಲಿ ರಕ್ತವಾಂತಿ ಆಗಿದ್ದರಿಂದ, ಅತಿಯಾದ ರಕ್ತಸ್ರಾವ ಆಗಿದ್ದು, ತೀವ್ರವಾಗಿ ಅಸ್ವಸ್ತಗೊಂಡಿದ್ದರು. ಇದೇ ಸಮಯದಲ್ಲಿ ದೀರ್ಘವಾಗಿ ಉಸಿರನ್ನು ಎಳೆದುಕೊಂಡಿದ್ದರಿಂದ ರಕ್ತವು ಶ್ವಾಸಕೋಶದ ಒಳಗೆ ನುಗ್ಗಿ ಉಸಿರಾಟಕ್ಕೆ ತೊಂದರೆಯಾಗಿದೆ ಇದು ಸಾವಿಗೆ ಕಾರಣವಾಗಿರಬಹುದು ಎಂದು ಡಿ.ಆರ್.ಎಮ್ ಆಸ್ಪತ್ರೆಯ ವೈದ್ಯ ಡಾ.ಮಂಜುನಾಥ್ ಹೇಳಿದರು.
ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ: ದೃವನಾರಾಯಣ್ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಹುಟ್ಟೂರಾದ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ನಡೆಯಲಿದ್ದು. ಅಂತ್ಯಕ್ರಿಯೆಯಲ್ಲಿ ರಾಜಕೀಯ ಗಣ್ಯರು, ಕುಟುಂಬಸ್ಥರು, ಹಾಗೂ ಆಪಾರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಇಂದು ಬೆಳಗ್ಗೆ ವಿಜಯನಗರದ ಮನೆಯ ಮುಂಭಾಗದಲ್ಲಿ ಸಾರ್ವಜನಿಕರ ಹಾಗೂ ಗಣ್ಯರ ಅಂತಿಮ ದರ್ಶನದ ನಂತರ ಕಾಂಗ್ರೆಸ್ ಕಚೇರಿಯಿಂದ ನಂಜನಗೂಡಿಗೆ ತೆರಳಿ ಮೆರವಣಿಗೆ ಮಾಡಿ, ರಾತ್ರಿ ಚಾಮರಾಜನಗರದ ಸ್ವಗ್ರಾಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ, ನಾಳೆ ಮಧ್ಯಾಹ್ನ ಎರಡು ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಆನಂತರ ಸ್ವಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಅಂದು ಮಹಾದೇವಪ್ರಸಾದ್ ಇಂದು ಧ್ರುವನಾರಾಯಣ್: ಬಲಿಷ್ಠ ನಾಯಕರನ್ನು ಕಳೆದುಕೊಂಡ ಕಾಂಗ್ರೆಸ್