ಮೈಸೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕುರಿತಂತೆ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಇತರರ ಹೇಳಿಕೆಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ತಿರುಗೇಟು ನೀಡಿದ್ದಾರೆ.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿ ಟಿ ರವಿಯವರಿಗೆ ಧಮ್ ಇದ್ದರೆ ಎರಡು ವರ್ಷದಿಂದ ಮೇಕೆದಾಟು ಯೋಜನೆ ಆರಂಭಕ್ಕೆ ಏಕೆ ಅನುಮತಿ ನೀಡಿಲ್ಲ ಎಂಬುದನ್ನು ಪ್ರಸ್ತಾಪ ಮಾಡಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಬೇಜವಾಬ್ದಾರಿಯಾಗಿ, ಉಡಾಫೆಯಾಗಿ ಮಾತನಾಡುವುದನ್ನು ಬಿಡಬೇಕು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸಿದ್ಧವಾಗಿದ್ದ ಡಿಪಿಆರ್ಗೆ ಇನ್ನೂ ಅನುಮೋದನೆ ನೀಡಿಲ್ಲ. ಹಾಗಾಗಿ ವಿರೋಧ ಪಕ್ಷವಾಗಿ ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹೇಳಿಕೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಕಾಂಗ್ರೆಸ್ನಲ್ಲಿ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿಯೊಂದು ಕೆಲಸವನ್ನು ಒಟ್ಟಿಗೆ ಮಾಡುತ್ತಾರೆ. ಇಲ್ಲಿ ಬಿಜೆಪಿಯವರು ಮನೆಯಲ್ಲಿ ಬೆಂಕಿ ಹಚ್ಚುವುದು, ಹುಳಿ ಹಿಂಡುವುದು, ಮನೆಯನ್ನು ಭಾಗ ಮಾಡುವುದನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ.. ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೇವಲ ಒಂದು ಜಾತಿಯ ಸಮೀಕರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಪದೇ ಪದೇ ಟೀಕಿಸುತ್ತಿದ್ದಾರೆ. ಚುನಾವಣೆ ಗೆದ್ದ ಮೇಲೆ ಜೆಡಿಎಸ್ನವರು ಆ ಜಾತಿಯನ್ನೇ ಮರೆಯುತ್ತಾರೆ. ಜೆಡಿಎಸ್ನವರು ಮೈಸೂರು ಭಾಗದಲ್ಲಿ ವೀಕ್ ಆಗುತ್ತಿದ್ದಾರೆ. ಜೊತೆಗೆ ಜೆಡಿಎಸ್ ಮುಖಂಡರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ಜೆಡಿಎಸ್ ಕೂಡ ಮೇಕೆದಾಟು ಪಾದಯಾತ್ರೆಯನ್ನು ವಿರೋಧಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಸುಧಾಕರ್ ಅನಾರೋಗ್ಯ ಸಚಿವ.. ಸುಧಾಕರೊಬ್ಬ ಅನಾರೋಗ್ಯ ಸಚಿವ. ಬೌದ್ಧ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಇನ್ನೊಬ್ಬರನ್ನ ಮೆಚ್ಚಿಸಲು ಹೊರಟಿದ್ದಾರೆ. ಬೌದ್ಧ ಧರ್ಮ ಯಾವತ್ತೂ ಅಪಾಯಕಾರಿಯಲ್ಲ. ತಿಳುವಳಿಕೆ ಇದ್ದವರಿಗೆ ಮಾತ್ರ ಬೌದ್ಧ ಧರ್ಮ ಅರ್ಥವಾಗುತ್ತದೆ. ಕೂಡಲೇ ಸುಧಾಕರ್ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೇ ಸುಧಾಕರ್ ಹೋದ ಕಡೆಯಲ್ಲೆಲ್ಲಾ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರಹ್ಲಾದ್ ಜೋಶಿಗೆ ತಿರುಗೇಟು.. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅರ್ಹತಾ ಪರೀಕ್ಷೆಯಲ್ಲಿ ಫೇಲಾದವರು ವಿದೇಶದಲ್ಲಿ ವ್ಯಾಸಂಗ ಮಾಡಲು ಹೋಗುತ್ತಾರೆ ಎಂಬ ಹೇಳಿಕೆ ಸರಿಯಲ್ಲ. ನಮ್ಮಲ್ಲಿ ಶುಲ್ಕ ವ್ಯವಸ್ಥೆ, ಸೀಟುಗಳ ಲಭ್ಯತೆ ಸರಿಯಾಗಿ ಇದ್ದರೆ ಅಲ್ಲಿಗೆ ಏಕೆ ಹೋಗುತ್ತಿದ್ದರು. ಉಕ್ರೇನ್ನಲ್ಲಿ ಒಂದು ತರಗತಿಗೆ 20 ಮಂದಿ ಇರುತ್ತಾರೆ. ಅಲ್ಲಿ ಶಿಕ್ಷಣ ಮತ್ತು ಸೌಲಭ್ಯ ಎರಡು ಚೆನ್ನಾಗಿದೆ. ಜೋಶಿ ಹೇಳಿಕೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡಿದ ಅವಮಾನ. ಹಾವೇರಿಯ ನವೀನ್ ಪ್ರತಿಭಾವಂತ ವಿದ್ಯಾರ್ಥಿ. ಇಲ್ಲಿ ಸೌಲಭ್ಯ ಚೆನ್ನಾಗಿ ಇದ್ದರೆ ಅಲ್ಲಿಗೆ ಏಕೆ ಹೋಗುತ್ತಿದ್ದ ಎಂದು ಪ್ರಹ್ಲಾದ್ ಜೋಶಿಗೆ ಧ್ರುವನಾರಾಯಣ್ ತಿರುಗೇಟು ನೀಡಿದರು.