ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಕುಕೃತ್ಯದ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಪಾರಂಪರಿಕ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಭದ್ರಪಡಿಸಲು ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಈ ಸಭೆ ನಡೆಯುತ್ತಿದ್ದು, ಅತ್ಯಾಚಾರಿಗಳನ್ನು ಯಾವ ರೀತಿ ವಿಚಾರಣೆ ನಡೆಸಬೇಕು, ಮಾಹಿತಿಯನ್ನು ಹೇಗೆ ಕಲೆ ಹಾಕಬೇಕು ಎಂಬುದರ ಬಗ್ಗೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಮೂರು ದಿನಗಳಿಂದ ಮೈಸೂರಿನಲ್ಲಿಯೇ ಠಿಕಾಣಿ ಹೂಡಿರುವ ಪ್ರವೀಣ್ ಸೂದ್, ಹೆಚ್ಚುತ್ತಿರುವ ಕ್ರೈಂ ರೇಟ್ಗೆ ಕಡಿವಾಣ ಹಾಕಲು ಇತ್ತೀಚಿಗೆ ಆಗಿರುವ ಅಪರಾಧ ಸನ್ನಿವೇಶಗಳೆಷ್ಟು ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇಂತಹ ಘಟನೆಗಳು ಮತ್ತೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: Mysuru Gang Rape: ಬಂಧಿತ ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
ಸಭೆಯಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ, ದಕ್ಷಿಣ ವಲಯದ ಐಜಿಪಿ ಮಧುಕರ್ ಪವಾರ್, ಮೈಸೂರು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ, ಮೈಸೂರು ಎಸ್ಪಿ ಚೇತನ್, ಡಿಸಿಪಿ ಪ್ರವೀಣ್, ಗೀತಾ ಪ್ರಸನ್ನ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದಾರೆ.