ಮೈಸೂರು: ನಗರದ ಲಲಿತಾದ್ರಿಪುರದ ಬಳಿ ನಿರ್ಜನ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರದ ಪೈಶಾಚಿಕ ಕೃತ್ಯ ನಡೆಸಿದ ಸಂಶಯದ ಮೇಲೆ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದು, ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಇಂದು ಹಿರಿಯ ಪೊಲೀಸ್ ಅಧಿಕಾರಿಗಳು, ಮಹಿಳಾ ಆಯೋಗದ ಅಧ್ಯಕ್ಷೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.
ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರದ ಬಳಿ ನಿರ್ಜನ ಪ್ರದೇಶದಲ್ಲಿ 24ರ ಮಂಗಳವಾರ ಸಂಜೆ ಘಟನೆ ನಡೆದಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಮುಂಬೈ ಮೂಲದ ವಿದ್ಯಾರ್ಥಿನಿಯು ಆಗಸ್ಟ್ ವೇಳೆ ಪ್ರಿಯಕರನ ಜೊತೆ ಬೈಕ್ನಲ್ಲಿ ಲಲಿತಾದ್ರಿಪುರದತ್ತ ತೆರಳಿದ್ದಳು.
ವಿದ್ಯಾರ್ಥಿನಿಯು ಪ್ರಿಯಕರನ ಜೊತೆ ಮಾತನಾಡುತ್ತಿರುವಾಗ ಅಲ್ಲೇ ಮದ್ಯಪಾನ ಮಾಡುತ್ತಿದ್ದ ಐದಾರು ಮಂದಿ ಯುವಕರು, ಈ ಯುವಕ ಮತ್ತು ಯುವತಿಯನ್ನು ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಮೊಬೈಲ್ ಕಿತ್ತುಕೊಂಡು ಸ್ನೇಹಿತನ ಮೇಲೆ ಹಲ್ಲೆ ನಡೆಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಎಲ್ಲ ಘಟನೆಯ ವಿಡಿಯೋ ಮಾಡಿರುವ ಮದ್ಯಪಾನಿಗಳ ಗುಂಪು ಇವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಸಿಗದಿದ್ದಾಗ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮೂವರ ಬಂಧನ?
ಅಲ್ಲದೆ ಈ ಪ್ರಕರಣದ ಬಗ್ಗೆ ವಿದ್ಯಾರ್ಥಿನಿ ಪೊಲೀಸರಿಗೆ ದೂರು ಕೊಡದಂತೆ ಅತ್ಯಾಚಾರಿಗಳು ಬೆದರಿಕೆ ಹಾಕಿದ್ದು, ದೂರು ನೀಡಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಸ್ನೇಹಿತ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳದ ಸುತ್ತ ಬಿಯರ್ ಬಾಟಲಿಗಳು ಕಂಡುಬಂದಿದ್ದು, ಘಟನೆಯ ಬಗ್ಗೆ ಹಲ್ಲೆಗೊಳಗಾದ ಸ್ನೇಹಿತನಿಂದ ಆಲನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಗೆ ಇಳಿದ ಪೊಲೀಸರು ಘಟನೆ ನಡೆದ ಸ್ಥಳದ ಮೊಬೈಲ್ ಟವರ್ ವ್ಯಾಪ್ತಿಯಲ್ಲಿ ಬಳಕೆಯಾದ ಮೊಬೈಲ್ ಸಂಖ್ಯೆಗಳು ಹಾಗೂ ಸುತ್ತಮುತ್ತ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಲ್ಲಿರುವ ಸಿಸಿಟಿವಿ ದೃಶ್ಯ ಆಧರಿಸಿ ಮೂವರನ್ನು ಬಂಧಿಸಿದ್ದು, ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆರು ಮಂದಿಯಿಂದ ಕೃತ್ಯ:
ಕೃತ್ಯದಲ್ಲಿ ಐವರಿಂದ ಆರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದೆ. ಹಲ್ಲೆಗೊಳಗಾದ ಯುವಕ ಪೊಲೀಸರಿಗೆ ಹೇಳಿಕೆ ನೀಡಿದ್ದು, ಒಂದೆರಡು ದಿನ ಸಂತ್ರಸ್ತೆಯನ್ನು ಯಾರೂ ಭೇಟಿಯಾಗುವುದು ಹಾಗೂ ಯಾವುದೇ ಮಾಹಿತಿ ಪಡೆಯದಂತೆ ವೈದ್ಯರು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಆಕೆಯನ್ನು ಭೇಟಿ ಮಾಡಲು ಬಂದ ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ಪ್ರಮೀಳಾ ನಾಯ್ಡು ಹಾಗೂ ಸಚಿವೆ ಶಶಿಕಲಾ ಜೊಲ್ಲೆಗೆ ಅವಕಾಶ ಸಿಕ್ಕಿಲ್ಲ.
34 ಸಾಕ್ಷಿಗಳ ಪತ್ತೆ:
ಯುವತಿಯನ್ನು ಭೇಟಿ ಮಾಡಲು ಬಂದಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಈ ಬಗ್ಗೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು ಘಟನೆಯ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ನಗರ ಪೊಲೀಸ್ ಕಮಿಷನರ್ಗೆ ಪತ್ರ ಬರೆದಿದ್ದಾರೆ. ಬಳಿಕ ಪೊಲೀಸ್ ಕಮೀಷನರ್ನ್ನು ಭೇಟಿಯಾಗಿ ಮಾಹಿತಿ ಪಡೆದ ಪ್ರಮೀಳಾ ನಾಯ್ಡು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಘಟನೆ ನಡೆದ ಸ್ಥಳದಿಂದ 34 ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ.
ಇಂದು ಅಥವಾ ನಾಳೆ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್ ಕಮೀಷನರ್ ತಿಳಿಸಿದ್ದು, ಘಟನೆ ನಂತರ ಯುವತಿ ಶಾಕ್ ಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಆಕೆಯನ್ನು ಭೇಟಿ ಮಾಡುವುದು ಬೇಡ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಸಂತ್ರಸ್ತೆ ಹಾಗೂ ಹಲ್ಲೆಗೊಳಗಾದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಾಮೂಹಿಕ ವರ್ಗಾವಣೆ ಎಚ್ಚರಿಕೆ:
ಘಟನೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಆಗ ಏನಾದರೂ ವೈಫಲ್ಯ ಕಂಡುಬಂದರೆ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಜೊತೆ ಮಾತನಾಡುತ್ತೇನೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ, ಪ್ರಕರಣದ ಎರಡನೇ ದಿನ ಬೆಳ್ಳಂಬೆಳಗ್ಗೆ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಚುರುಕುಗೊಳಿಸಿದೆ. ಮೂವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರಿಗಾಗಿ ಶೋಧ ನಡೆದಿದೆ. ಘಟನೆ ಖಂಡಿಸಿ ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದವು.
ಇಂದು ಮೈಸೂರಿಗೆ ಗೃಹ ಸಚಿವರು:
ಗುರುವಾರ ರಾತ್ರಿ ಮೈಸೂರಿಗೆ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಆಗಮಿಸಲಿದ್ದಾರೆ. ಮೈಸೂರಿನಲ್ಲಿ ವಾಸ್ತವ್ಯ ಮಾಡಿ ನಾಳೆ ಬೆಳಗ್ಗೆ ಚಾಮುಂಡಿ ತಾಯಿ ದರ್ಶನ ಪಡೆದು, 11 ಗಂಟೆಗೆ ಮೈಸೂರು ನಗರ ಪೊಲೀಸ್ ಕಮೀಷನರ್ ಕಚೇರಿಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಇದನ್ನೂ ಓದಿ: Gangrape Case: ನನಗೆ ವಿಷಾದವಾಗಿದೆ, ಹೇಳಿಕೆ ಹಿಂದಕ್ಕೆ ಪಡೆಯುತ್ತೇನೆ: ಗೃಹ ಸಚಿವ