ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 2019-20 ಮತ್ತು 2020-21ರ ಘಟಿಕೋತ್ಸವ ಸಮಾರಂಭವನ್ನು ಅಕ್ಟೋಬರ್ 18ರ ಸಂಜೆ 4ಕ್ಕೆ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಗೀತ ವಿವಿಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ 5 ಮತ್ತು 6 ನೇ ಘಟಿಕೋತ್ಸವ ಆಚರಿಸಲಾಗುತ್ತಿದ್ದು, ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮುಖ್ಯ ಅತಿಥಿ ಸ್ಥಾನ ವಹಿಸಲಿದ್ದಾರೆ.
5ನೇ ಘಟಿಕೋತ್ಸವದ ಅಂಗವಾಗಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸುದೀರ್ಘ 40 ವರ್ಷಗಳ ಸೇವೆ ಮಾಡಿರುವ ವಿದುಷಿ ಡಿ.ಶಶಿಕಲಾ (ವಿಶೇಷ ಚೇತನ) ಅವರಿಗೆ, ಹಿಂದುಸ್ತಾನಿ ಸಂಗೀತ ಗಾಯನದಲ್ಲಿ ಪ್ರಸಿದ್ಧರಾದ ಪಂಡಿತ್ ವಿನಾಯಕ ತೊರವಿ ಅವರಿಗೆ ಹಾಗೂ ಸಂಗೀತದಲ್ಲಿ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಮಧುಸೂದನ್ ಸಾಯಿ ಅವರಿಗೆ, 6ನೇ ಘಟಿಕೋತ್ಸವದ ಅಂಗವಾಗಿ ಸಂಗೀತ ಸಂಶೋಧನೆಯಲ್ಲಿ ತೊಡಗಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಹಿಂದುಸ್ತಾನಿ ಸಂಗೀತ ಕ್ಷೇತ್ರದ ಪರಿಣತರಾದ ಪಂಡಿತ ಶ್ರೀಪಾದ ಹೆಗಡೆ ಕಂಪ್ಲಿ ಮತ್ತು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಪ್ರೊ. ಎಸ್ ಸಿ ಶರ್ಮಾ ಸೇರಿ ಒಟ್ಟು ಆರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.
ಅಲ್ಲದೆ ವಿವಿಧ ವಿಷಯಗಳಲ್ಲಿ ದೇಸಿ ಸಂಗೀತ ಐದನಿ ಕುರಿತಂತೆ ಡಾ. ಹಂಸಲೇಖ ಅವರಿಗೆ, ಪುಜಾಸತ್ತಾತ್ಮಕ ಪಕ್ರಿಯೆಯಲ್ಲಿ ಡಾ. ರಾಜಕುಮಾರ್ ಪಾತ್ರ ವಿಷಯದಲ್ಲಿ ಮಂಜುನಾಥ್ ಎಂ ಅವರಿಗೆ, ಕೋನಾರ್ಕ್ ದೇವಾಲಯದ ವಾಸ್ತುಶಿಲ್ಪದಲ್ಲಿನ ನೃತ್ಯಭಂಗಿ ಕುರಿತು ಶ್ರೀಮತಿ ಶಾಲಿನಿ ಎ ಆರ್, ದಕ್ಷಿಣ ಭಾರತದ ಕರ್ನಾಟಕ ಸಂಗೀತದಲ್ಲಿ ತಂತಿ ವಾದ್ಯಗಳು ವಿಷಯದಲ್ಲಿ ಡಾ.ಸೌಮ್ಯಾ ಎಸ್ ರಂಗಭೂಮಿ ಒಂದು ವೃತ್ತಿಪರ ಅಧ್ಯಯನಕ್ಕೆ ಕೆ ಎನ್ ಹಿರಣ್ಣಯ್ಯ ಅವರಿಗೆ ಮತ್ತು ಯೋಗಾ ಮತ್ತು ಪ್ರದರ್ಶನ ಕಲೆಗಳ ಶಿಕ್ಷಣ ಮತ್ತು ಮಾನಸಿಕ ಬದಲಾವಣೆಯ ಮೇಲಿನ ಪರಿಣಾಮಗಳ ವಿಷಯದಲ್ಲಿ ಡಾ. ಎ.ಲೋಕೇಶ್ ಅವರು ಸೇರಿದಂತೆ ಒಟ್ಟು 6 ಜನರಿಗೆ ಡಿಲೀಟ್ ಪದವಿ ನೀಡಲಾಗುತ್ತಿದೆ.
2019-2020 ನೇ ಸಾಲಿನಲ್ಲಿ ಉತ್ತೀರ್ಣರಾದ MPA ವಿಭಾಗದಲ್ಲಿ -06, BPA ವಿಭಾಗದಲ್ಲಿ -03 ವಿದ್ಯಾರ್ಥಿಗಳಿಗೆ ಮತ್ತು 2020-2021 ನೇ ಸಾಲಿನಲ್ಲಿ MPA ವಿಭಾಗದಲ್ಲಿ-07, BPA ವಿಭಾಗದಲ್ಲಿ ಉತ್ತೀರ್ಣರಾದ 3 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಲಾಗುತ್ತದೆ.
ಸರ್ಕಾರವು ವಿಶ್ವವಿದ್ಯಾಲಯದ ಹೊಸ ಕಟ್ಟಡಕ್ಕೆ ಅನುಮತಿಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ತದನಂತರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಕುಲಪತಿಗಳಾದ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ತಿಳಿಸಿದರು.
ಇದನ್ನೂ ಓದಿ: ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸೇರಿ ಮೂವರು ಗಣ್ಯರಿಗೆ ಮೈಸೂರು ವಿವಿಯ ಗೌರವ ಡಾಕ್ಟರೇಟ್