ಮೈಸೂರು: ಬೇಸಿಗೆಯ ರಜೆ ಹಿನ್ನೆಲೆಯಲ್ಲಿ ಹಳ್ಳಿ ಸೊಗಡಿನ ಕಣ್ಣಾಮುಚ್ಚಾಲೆ ಆಟಕ್ಕೆ ಇಬ್ಬರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ. ನಂಜನಗೂಡು ತಾಲೂಕಿನ ಮಸಗೆ ಗ್ರಾಮದ ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ(12) ಹಾಗು ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತಪಟ್ಟ ಬಾಲಕಿಯರು.
ತಗಡೂರು ಗ್ರಾಮದ ಹನುಮಂತನಾಯಕ ಎಂಬುವರಿಗೆ ಸೇರಿರುವ ಐಸ್ ಕ್ರೀಮ್ ಬಾಕ್ಸ್ನಲ್ಲಿ ಮಧ್ಯಾಹ್ನ 12ರ ಸಮಯದಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡುವಾಗ ಬಾಕ್ಸ್ ಒಳಗೆ ಹೋಗಿದ್ದಾರೆ. ನಂತರ ಬಾಕ್ಸ್ನ ಬಾಗಿಲು ಲಾಕ್ ಆಗಿದೆ. ಪರಿಣಾಮ, ಉಸಿರುಗಟ್ಟಿ ಇಬ್ಬರೂ ಸಾವಿಗೀಡಾದರು.
ಇದನ್ನೂ ಓದಿ: 'ಹಿಂದಿ ರಾಷ್ಟ್ರೀಯ ಭಾಷೆಯಲ್ಲ' ಎಂದ ಸುದೀಪ್‌ಗೆ ಅಜಯ್ ದೇವಗನ್ ಖಾರ ಪ್ರತಿಕ್ರಿಯೆ; ನೆಟ್ಟಿಗರಿಂದ ತರಾಟೆ
ಸುಮಾರು ಅರ್ಧ ಗಂಟೆ ಕಳೆದರೂ ಹೊರಬರದ ಕಾರಣ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ. ಮೃತ ಬಾಲಕಿಯರಿಬ್ಬರ ಶವ ಸಂಸ್ಕಾರ ನಡೆಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ನಂಜನಗೂಡು ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಮಸಗೆ ಗ್ರಾಮ ಸೇರಿದೆ.