ಮೈಸೂರು: ಹಳೇ ಲವರ್ ಮೇಲಿನ ಆಸೆಯಿಂದ ತುಂಬು ಗರ್ಭಿಣಿ ಪತ್ನಿಯ ಕೆನ್ನೆಗೆ ಪತಿರಾಯ ಹೊಡೆದು, ಬಳಿಕ ಆಕೆಯನ್ನು ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ. ಇದೀಗ ಈ ದುರ್ಘಟನೆ ಕುರಿತು ಡಿಸಿಪಿ ಡಾ. ಎ.ಎನ್.ಪ್ರಕಾಶ ಗೌಡ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ತನ್ನ ಪತ್ನಿ ಕೀರ್ತನಾ(28)ಳನ್ನು ಹೊಡೆದು ಕೊಲೆ ಮಾಡಿ ನಂತರ ಆತ್ಮಹತ್ಯೆಯೆಂದು ನಂಬಿಸಲು ಹೊರಟಿದ್ದಾನೆ. ಆತನಿಗೆ ಅಕ್ರಮ ಸಂಬಂಧವಿದೆ ಎಂದು ಕೀರ್ತನಾ ತಂದೆ ಕೃಷ್ಣ ದೂರು ದಾಖಲಿಸಿದ್ದಾರೆ ಎಂದಿದ್ದಾರೆ.
ಕೀರ್ತನಾ ಪತಿ ರಾಘವೇಂದ್ರ, ನನ್ನ ಹೆಂಡತಿಗೆ ಎರಡು ಬಾರಿ ಗರ್ಭಪಾತವಾಗಿತ್ತು. 3ನೇ ಬಾರಿಗೆ ಗರ್ಭ ಧರಿಸಿದ್ದ ಈಕೆ, ಹೊಟ್ಟೆಯೊಳಗೆ ಮಗು ಸರಿಯಾಗಿ ಬೆಳೆಯುತ್ತಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಈತನನ್ನು ವಶಕ್ಕೆ ಪಡೆದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರ ಸತ್ಯಾಂಶ ಹೊರ ಬರಲಿದೆ ಎಂದು ಹೇಳಿದರು.
ಓದಿ: ಪ್ರೇಯಸಿಯ ಮೇಲಿತ್ತು ಪ್ರೀತಿ: ಕಟ್ಕೊಂಡವಳ ಕೊಲೆಗೈದ ಪತಿಮಹಾಶಯ
ವಿಜಯನಗರದಲ್ಲಿ ವೈದ್ಯ ದಂಪತಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ ವಿಚಾರವಾಗಿ ಆರೋಪಿಗಳ ಬಂಧನಕ್ಕಾಗಿ ತಂಡ ರಚನೆ ಮಾಡಲಾಗಿದೆ. ಬೇರೆ ಬೇರೆ ರೀತಿಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ವೈದ್ಯ ದಂಪತಿ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ತಿಳಿಸಿದರು.