ಮೈಸೂರು: ಜಿಲ್ಲಾಸ್ಪತ್ರೆಯಲ್ಲಿ ಕೈಗೊಳ್ಳಲಾಗಿದ್ದ 3ನೇ ಹಂತದ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಡಿಸಿ ರೋಹಿಣಿ ಸಿಂಧೂರಿ ಅವರು ಚಾಲನೆ ನೀಡಿದರು.
ಈ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನವು ಮೊದಲ ಹಂತದಲ್ಲಿ ಶೇ 90 ಹಾಗೂ 2ನೇ ಹಂತದಲ್ಲಿ ಶೇ 50ರಷ್ಟು ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‍ಗಳು, 2ನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತೆಯರಿಗೆ ಲಸಿಕೆ ಕೊಡಲಾಗಿದೆ. ಇಂದು 3ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಜಿಲ್ಲೆಯಲ್ಲಿ ಒಟ್ಟು ನಾಲ್ಕುವರೆ ಲಕ್ಷ ಮಂದಿ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಗುರಿ ಇದೆ ಎಂದರು.
ಬೇಡಿಕೆಗೆ ಅನುಗುಣವಾಗಿ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಲಸಿಕೆ ಕೊಡಲಾಗುವುದು. ಮೊದಲ ಲಸಿಕೆ ಪಡೆದ 28 ದಿನಗಳ ನಂತರ 2ನೇ ಲಸಿಕೆಯನ್ನು ತಪ್ಪದೇ ಪಡೆಯಬೇಕು. ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಇದುವರೆಗೂ ಲಸಿಕೆ ಪಡೆಯದವರಿಗೆ ಈಗ ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆಯಲು ಇಚ್ಛಿಸುವ ಮಂದಿ ನೇರವಾಗಿ ಜಿಲ್ಲಾಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿಕೊಂಡರೆ ಸಾಕು, ಸಾರ್ವಜನಿಕರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಓದಿ: ಬಜೆಟ್ ಅಧಿವೇಶನಕ್ಕೆ ದಿನಗಣನೆ : ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಿರುವ ಸವಾಲುಗಳೇನು?
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಟಿ. ಅಮರನಾಥ್ ಮಾತನಾಡಿ, 3ನೇ ಹಂತದ ಲಸಿಕೆ ಅಭಿಯಾನವು 60 ವರ್ಷ ಮೇಲ್ಪಟ್ಟ ಹಾಗೂ ಅಸ್ವಸ್ಥತೆಗಳಿಂದ ಬಳಲುತ್ತಿರುವ 45ರಿಂದ 59 ವರ್ಷದೊಳಗಿನವರನ್ನೂ ಒಳಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 10 ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆಯನ್ನು ನೀಡಲಾಗುತ್ತಿದ್ದು, ನಗರದಲ್ಲಿ 04, ಗ್ರಾಮಾಂತರದಲ್ಲಿ 06 ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ವಿತರಿಸಲಾಗುವುದು. ಮೈಸೂರು ಜಿಲ್ಲಾ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜಿನ ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ, ಅಪೋಲೊ ಆಸ್ಪತ್ರೆ, ಗ್ರಾಮಾಂತರದಲ್ಲಿ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ 70 ಮಂದಿ ತಮ್ಮ ದಾಖಲೆಗಳನ್ನು ನೀಡಿ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಂಡಿದ್ದು, 2 ಕೊಠಡಿಗಳಲ್ಲಿ ಪ್ರತಿ ದಿನ 200 ಜನರಿಗೆ ಲಸಿಕೆ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೋಂದಾಯಿಸಿಕೊಂಡರೆ ಕೇಂದ್ರಗಳನ್ನು ವಿಸ್ತರಿಸಲಾಗುವುದು ಎಂದರು.