ಮೈಸೂರು: ನಾಳೆ ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ಸಾಂಪ್ರದಾಯಿಕ ದಸರಾದಲ್ಲಿ ಮಹೇಂದ್ರ ನೇತೃತ್ವದ 3 ಆನೆಗಳು ಭಾಗವಹಿಸಲಿದ್ದು, ಇಂದು 3 ಆನೆಗಳು ಶ್ರೀರಂಗಪಟ್ಟಣಕ್ಕೆ ತೆರಳಿದವು.
ಮಹಾರಾಜರು ಶ್ರೀರಂಗಪಟ್ಟಣದಲ್ಲಿ ದಸರಾವನ್ನು ಹಿಂದೆ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿದ್ದ ಪ್ರತೀಕವಾಗಿ ಶ್ರೀರಂಗಪಟ್ಟಣದಲ್ಲಿ ಮಂಡ್ಯ ಜಿಲ್ಲಾಡಳಿತ ಸಾಂಪ್ರದಾಯಿಕ ದಸರಾವನ್ನು ನಾಳೆ ಆಚರಣೆ ಮಾಡಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಜಂಬೂಸವಾರಿಯಲ್ಲಿ ಭಾಗವಹಿಸಲು ಮಹೇಂದ್ರ, ಕಾವೇರಿ ಮತ್ತು ವಿಜಯ ಆನೆಗಳು ಶ್ರೀರಂಗಪಟ್ಟಣಕ್ಕೆ ರವಾನಿಸಲಾಗಿದೆ.
ನಾಳೆ ಶ್ರೀರಂಗಪಟ್ಟಣದಲ್ಲಿ 280 ಕೆಜಿ ತೂಕದ ಮರದ ಅಂಬಾರಿಯಲ್ಲಿ ದೇವಿ ವಿಗ್ರಹವನ್ನು ಇಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುವುದು. ಇದಕ್ಕಾಗಿ ಶ್ರೀರಂಗಪಟ್ಟಣದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಂದು 3 ಆನೆಗಳನ್ನು ಲಾರಿ ಮೂಲಕ ತೆಗೆದುಕೊಂಡು ಹೋಗಲಾಯಿತು.
ಆನೆಗಳ ಜೊತೆಗೆ ಮಾವುತರು, ಕಾವಾಡಿಗರು, ಅರಣ್ಯ ಸಿಬ್ಬಂದಿ ಮತ್ತು ವೈದ್ಯರ ತಂಡ ಹೋಗಿದ್ದು, ಶ್ರೀರಂಗಪಟ್ಟಣ ಜಂಬೂಸವಾರಿಯ ಸಂದರ್ಭದಲ್ಲಿ ಭಾರಿ ಶಬ್ದ ಬರುವ ಪಟಾಕಿ ಸಿಡಿಸದಂತೆ ಎಚ್ಚರಿಕೆ ನೀಡಲಾಗಿದೆ.