ಮೈಸೂರು: ಲಕ್ಷ್ಮಣ ತೀರ್ಥ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಕೊಡಗಿನ ವಿರಾಜಪೇಟೆ ತಾಲೂಕಿನಲ್ಲಿ ದಾಖಲೆಗೂ ಮೀರಿ ಮಳೆಯಾಗುತ್ತಿರುವುದರಿಂದ ಲಕ್ಷ್ಮಣ ತೀರ್ಥ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹುಣಸೂರು ತಾಲೂಕಿನ ಕೋಣನಹೊಸಹಳ್ಳಿ, ದೊಡ್ಡಹೆಜ್ಜೂರು, ಬಿಲ್ಲೇನಹೊಸಹಳ್ಳಿ, ಹನಗೋಡು ಸೇರಿದಂತೆ ಲಕ್ಷ್ಮಣ ತೀರ್ಥ ನದಿಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಮೈಕ್ ಮೂಲಕ ತಿಳಿಸುತ್ತಿದ್ದಾರೆ.
ಮಳೆ ಹೆಚ್ಚಾದರೆ ಪ್ರವಾಹ ಬರುವ ಸಾಧ್ಯತೆ ಇರುವುದರಿಂದ ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಿದ್ದಾರೆ. ಇನ್ನು ಭಾರೀ ಮಳೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಾದ ನೇರಳಗುಪ್ಪೆ, ಕಿರಂಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳು ಕುಸಿದಿದೆ.