ಮೈಸೂರು: ಯಾರು ರೀ ಈ ಅಶ್ವತ್ಥ್ ನಾರಾಯಣ್? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿ ಪ್ರತಿಕ್ರಿಯೆ ನೀಡಿದರು.
ಸಿಎಂ ಪಾಲ್ಗೊಂಡ ವೇದಿಕೆಯಲ್ಲೇ ಡಿ.ಕೆ.ಸುರೇಶ್ ಹಾಗು ಸಚಿವ ಅಶ್ವತ್ಥ್‌ನಾರಾಯಣ್ ಗದ್ದಲ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಮನಗರದಲ್ಲಿ ಅಂಬೇಡ್ಕರ್, ಕೆಂಪೇಗೌಡ ಪ್ರತಿಮೆ ಯಾರು ಕಟ್ಟಿದ್ದು? ಅಶ್ವತ್ಥ್‌ನಾರಾಯಣ್ ಕಟ್ಟಿದ್ನಾ?, ಅದು ನಮ್ಮ ಕೊಡುಗೆ. ರಾಜಕೀಯ ಏನೇ ಇರಲಿ. ಕುಮಾರಸ್ವಾಮಿ ಒಂದಷ್ಟು ಬಿಲ್ಡಿಂಗ್ಸ್ ಕಟ್ಟಿದ್ದಾರೆ. ಅದನ್ನು ಒಪ್ಪಿಕೊಳ್ಳುವ ವಿಚಾರ ಎಂದರು.
ಕುಮಾರಸ್ವಾಮಿಯಾದ್ರೂ ರಾಮನಗರದಲ್ಲಿ ಕೆಲವು ಕಟ್ಟಡಗಳನ್ನು ಕಟ್ಟಿದ್ದಾರೆ. ಅಶ್ವತ್ಥ್ ನಾರಾಯಣ್ ಏನ್ರೀ ಮಾಡಿದ್ದಾರೆ?. ಅಶ್ವತ್ಥ್‌ನಾರಾಯಣ್‌ಗೂ ರಾಮನಗರಕ್ಕೂ ಏನ್ ಸಂಬಂಧ?. ಅಶ್ವತ್ಥ್ ನಾರಾಯಣ್ ಜಾಸ್ತಿ ಹೇಳ್ತಾನೆ. ವೇದಿಕೆಯಲ್ಲಿ ಏನ್ ಸುಳ್ಳು ಹೇಳಿದ್ನೋ, ಯಾಕೆ ಗಲಾಟೆ ಆಯ್ತೋ ಗೊತ್ತಿಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ತಿಳಿಸಿದರು.
ಬಂಡೆ ಕಲ್ಲು ಜೀರ್ಣ ಮಾಡಿಕೊಳ್ಳುತ್ತಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಒಳ್ಳೆಯ ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಜಾಸ್ತಿ ಮಾತನಾಡುವುದಿಲ್ಲ ಎಂದರು.
'ಹತಾಶ ಮನೋಭಾವದಿಂದ ಹೀಗೆ ಮಾತನಾಡುತ್ತಿದ್ದಾರೆ'
ಕುಮಾರಣ್ಣ ನಮ್ಮ ಬಗ್ಗೆ ಏನು ಮಾತಾಡಿದರೂ ಅದು ನಮಗೆ ಆಶೀರ್ವಾದವಿದ್ದಂತೆ. ಅವರು ಹತಾಶ ಮನೋಭಾವದಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಹಾಗು ಮೇಕೆದಾಟು ಯೋಜನೆಗಾಗಿ ಜನಾಂದೋಲನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿಗೆ ಮಾತಿನ ಮೂಲಕವೇ ಟಾಂಗ್ ನೀಡಿದರು.
ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೊರೊನಾ ಹೆಸರಲ್ಲಿ ಕುಂಟು ನೆಪ ಹೇಳಿಕೊಂಡು ಪಾದಯಾತ್ರೆಗೆ ತಡೆಯೊಡ್ಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಮೇಲಿನ ಅಸೂಯೆ, ಹೊಟ್ಟೆ ಕಿಚ್ಚಿನಿಂದ ಈ ರೀತಿ ಮಾಡಲಾಗುತ್ತಿದೆ. ಅಸೂಯೆಗೆ ಮದ್ದಿಲ್ಲ. ನಾವು ಇರುವವರೆಗೂ ಹೋರಾಟ ತಡೆಗಟ್ಟಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ನಾನು ಈ ಮೂಲಕ ಬಿಜೆಪಿಯವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಮ್ಮ ಉದ್ದೇಶಿತ ಪಾದಯಾತ್ರೆಯನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದರು.
ಇದನ್ನೂ ಓದಿ: ಸಂಕ್ರಾಂತಿ ಒಳಗಾಗಿ ಸಚಿವ ಸಂಪುಟ ವಿಸ್ತರಣೆ: ಯತ್ನಾಳ್ ಪುನರುಚ್ಚಾರ