ಮೈಸೂರು: ಅಡುಗೆ ಅನಿಲ ವಿತರಣೆ ವೇಳೆಯಲ್ಲಿ ನಿಗದಿತ ಶುಲ್ಕಕ್ಕಿಂತ, ಹೆಚ್ಚು ಚಾರ್ಜಸ್ ಮಾಡಿದರೆ, ಅದಕ್ಕೆ ಸಂಬಂಧಿಸಿದ ವಿತರಕರ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ. ಅಡುಗೆ ಅನಿಲ ವಿತರಕರು ತಮ್ಮ ವ್ಯಾಪಾರದ ವ್ಯಾಪ್ತಿಯಲ್ಲಿ ಕಚೇರಿ ಅಥವಾ ಮಳಿಗೆಯಿಂದ 15 ಕಿ.ಮೀ. ವರೆಗೆ ಗ್ರಾಹಕರಿಂದ ಯಾವುದೇ ಹೆಚ್ಚುವರಿ ವಿತರಣೆ ಶುಲ್ಕ(ಡೆಲಿವರಿ ಚಾರ್ಜಸ್) ಪಡೆದರೆ, ಅಂಥ ವಿತರಕರಿಗೆ ನೀಡಿರುವ ಲೈಸೆನ್ಸ್ ರದ್ದು ಮಾಡಲಾಗುವುದು ಸೂಚನೆ ಕೊಟ್ಟಿದ್ದಾರೆ.
ಜಿಲ್ಲೆಯಲ್ಲಿರುವ ಕೆಲ ಅಡುಗೆ ಅನಿಲ ವಿತರಕರು ಗ್ರಾಹಕರಿಂದ ವಿತರಣೆ ಶುಲ್ಕವನ್ನು (ಡೆಲಿವರಿ ಚಾರ್ಜಸ್) ಬಿಲ್‌ನಲ್ಲಿ ನಮೂದಿಸಿರುವುದಕ್ಕಿಂತ ಹೆಚ್ಚಿನ ಮೊತ್ತವನ್ನು ಅನಧಿಕೃತವಾಗಿ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ರೀತಿ ಗ್ರಾಹಕರಿಂದ ಅಡುಗೆ ಅನಿಲ ವಿತರಣೆಗೆ ಅನಧಿಕೃತವಾಗಿ ಹೆಚ್ಚುವರಿ ಹಣ ಪಡೆಯುತ್ತಿರುವುದು ಕಾನೂನು ಬಾಹಿರವಾಗಿದೆ. ಇದು ಲಿಕ್ವಿಫಿಡಿ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000 ಉಲ್ಲಂಘಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಅಡುಗೆ ಅನಿಲ ವಿತರಕರು ಲೈಸೆನ್ಸ್ ನಲ್ಲಿರುವ ತಮ್ಮ ವ್ಯಾಪಾರ ಪ್ರದೇಶದ ವ್ಯಾಪ್ತಿಯಲ್ಲಿ ಕಚೇರಿ ಅಥವಾ ಮಳಿಗೆಯಿಂದ 15 ಕಿ.ಮೀ.ವರೆಗೆ ಯಾವುದೇ ಹೆಚ್ಚುವರಿ ವಿತರಣೆ ಶುಲ್ಕವನ್ನು(ಡೆಲಿವರಿ ಚಾರ್ಜಸ್) ಪಡೆಯದೆ ಅಡುಗೆ ಅನಿಲ ವಿತರಣೆ ಮಾಡಬೇಕು. 15 ಕಿಲೋ ಮೀಟರ್ ನಂತರದ ಅಂತರಕ್ಕೆ ನಿಯಾಮಾನುಸಾರ ದರವನ್ನು ಬಿಲ್‌ನಲ್ಲಿ ನಮೂದಿಸಿ, ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ಪಡೆಯಲು ಆದೇಶಿಸಿದೆ.
ನಿಯಮಬಾಹಿರವಾಗಿ ಹೆಚ್ಚುವರಿ ವಿತರಣೆ ಶುಲ್ಕ ಪಡೆದಿರುವ ಬಗೆಗಿನ ದೂರು ಸಾಬೀತಾದಲ್ಲಿ ಅಂತರ ವಿತರಕರಿಗೆ ನೀಡಿರುವ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗುವುದೆಂದು ಆದೇಶಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರು, ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರು ಆಗಿಂದಾಗ್ಗೆ ಮೇಲ್ವಿಚಾರಣೆ, ಪರಿಶೀಲನೆ ಮಾಡಿ ವರದಿ ಮಾಡಲು ಪ್ರಕಟಣೆ ಮೂಲಕ ಸೂಚಿಸಿದ್ದಾರೆ.
ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಿಸಿದ ಒಎಂಸಿ, ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೂರನೇ ತಿಂಗಳು ಸಹ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಹೆಚ್ಚಿಸಿ, ಗ್ರಾಹಕರಿಗೆ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 350.50 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದು ವಾಣಿಜ್ಯೋದ್ದೇಶದ ಗ್ರಾಹಕರ ಕೈ ಸುಡಲಿದೆ. ಇನ್ನು ಗೃಹಬಳಕೆಯ ಸಿಲಿಂಡರ್ ದರ 50 ರೂಪಾಯಿಗೆ ಏರಿಕೆ ಮಾಡಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 2,119.50 ರೂ. ಗೆ ಏರಿಕೆ ಕಂಡಿದೆ.ಡೊಮೆಸ್ಟಿಕ್ ಗ್ಯಾಸ್ ದರ ಇಂದಿನಿಂದ ಪ್ರತಿ ಸಿಲಿಂಡರ್‌ಗೆ 50 ರೂ.ಯಷ್ಟು ಏರಿಕೆ ಕಂಡಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14 ಕೆ.ಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1,103 ರೂ. ಗೆ ಏರಿಕೆ ಕಂಡಿದೆ.
ವಾಣಿಜ್ಯ ಸಿಲಿಂಡರ್‌ಗಳ ಪರಿಷ್ಕೃತ ದರವನ್ನು ಮಾರ್ಚ್ 1 ರಿಂದಲೇ ಜಾರಿಗೆ ತರಲಾಗಿದೆ ಎಂದು ಒಎಂಸಿ ತಿಳಿಸಿದೆ. ಪ್ರತಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ 350.50 ರೂಪಾಯಿ ಏರಿಕೆ ಮಾಡಿದ್ದು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಸೇರಿದಂತೆ ವಿವಿಧ ವಾಣಿಜ್ಯೋದ್ಯಮಗಳು ಬೆಲೆ ಏರಿಕೆ ಬಿಸಿ ಅನುಭವಿಸಲಿವೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಊಟದ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜನಬಳಕೆ ಸಿಲಿಂಡರ್ ದರದಲ್ಲಿ 50 ಏರಿಕೆ ಮಾಡಿರುವುದು ಜನರಲ್ಲಿ ಆತಂಕ ತಂದಿದೆ.
ಇದನ್ನೂಓದಿ:ಪಿಯು ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: 1 ಅಂಕದ 20 ಬಹುಮಾದರಿಯ ಪ್ರಶ್ನೆಗೆ ಆದ್ಯತೆ