ಮೈಸೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಅಧಿಕವಾಗುತ್ತಿರುವ ಬೆನ್ನಲ್ಲೇ ಸೈಬರ್ ಅಪರಾಧಗಳು ಸಹ ಹೆಚ್ಚಾಗುತ್ತಿವೆ. ಈ ಬಗ್ಗೆ ಯುವಕರಿಗೆ ಶಿಕ್ಷಣ ನೀಡಲು ಮೈಸೂರು ರಾಜವಂಶಸ್ಥ ದಂಪತಿಗಳು ಇತರರ ಸಹಯೋಗದೊಂದಿಗೆ ಸೈಬರ್ ಹಬ್ ಕೋರ್ಸ್ ಆರಂಭಿಸಿದ್ದಾರೆ.
ಹೌದು, ಯುವಕರಲ್ಲಿ ಸೈಬರ್ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಆಧುನಿಕ ಕೋರ್ಸ್ ಆರಂಭಿಸಿದ್ದು, ಈ ಮೂಲಕ ರಾಜ ವಂಶಸ್ಥರು ಮತ್ತೊಂದು ರೀತಿಯ ಆಧುನಿಕ ಜನೋಪಯೋಗಿ ಕೆಲಸವನ್ನು ತಮ್ಮ ಭೇರುಂಡ ಫೌಂಡೇಶನ್ ಮಾಡುತ್ತಿದ್ದಾರೆ.
ಪ್ರಸಕ್ತ ವಿದ್ಯಮಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯವೆಂದರೆ ಸೈಬರ್ ಭದ್ರತೆ. ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಆಗು-ಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮತ್ತು ಸೈಬರ್ ಭದ್ರತೆ ಬಗ್ಗೆ ವಿಶೇಷ ಜ್ಞಾನ ಹೊಂದುವ ಉದ್ದೇಶದೊಂದಿಗೆ ಮೈಸೂರಿನಲ್ಲಿ ಸೈಬರ್ ಹಬ್ ಮಾಡುವ ಕಾರ್ಯ ಆರಂಭವಾಗಿದೆ.
ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ: ಭೇರುಂಡ ಫೌಂಡೇಶನ್, ಮೈರಾ ಸ್ಕೂಲ್ ಆಫ್ ಬ್ಯುಸಿನೆಸ್, ಇನ್ಫರ್ಮೇಷನ್ ಶೇರಿಂಗ್ ಅನಾಲಿಸಿಸ್ ಸೆಂಟರ್, ಸೈಬರ್ವರ್ಸ್ ಸಂಸ್ಥೆ, ಐ ತ್ರಿಬಲ್ - ಇ ಸಹಯೋಗದೊಂದಿಗೆ ಸಾಂಸ್ಮೃತಿಕ ನಗರಿ ಮೈಸೂರಿನ ಬೆಳವಾಡಿ ಬಳಿಯಿರುವ ಮೈರಾ ಸ್ಕೂಲ್ ಆಫ್ ಬಿಸಿನೆಸ್ನಲ್ಲಿ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಹಬ್ ಪ್ರಾರಂಭ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿ ಅಗತ್ಯ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ತಲೆ ಎತ್ತಲಿದೆ ದೇಶದ ಮೊಟ್ಟ ಮೊದಲ ಸೆಮಿಕಂಡಕ್ಟರ್ ಘಟಕ: ಅಶ್ವತ್ಥ ನಾರಾಯಣ್
ಸೈಬರ್ ದಾಳಿಗಳನ್ನು ತಡೆಯುವುದು ಮತ್ತು ಅದರ ಸುರಕ್ಷತೆಯ ಬಗ್ಗೆ ಯುವಕರು, ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಇದಕ್ಕೆ ಕೈ ಜೋಡಿಸಿದ್ದಾರೆ. ಕರ್ನಾಟಕ ಡಿಜಿಟಲ್ ಎಕಾನಮಿ ಫೌಂಡೇಷನ್ನ ಕ್ಲಸ್ಟರ್ ಹೆಡ್ ಕೆ.ಎಸ್.ಸುಧೀರ್ ಸೈಬರ್ ಹಬ್ ನಿರ್ವಹಣೆ ಉಸ್ತುವಾರಿ ಹೊತ್ತಿದ್ದಾರೆ.
ಸೈಬರ್ ಹಬ್ ಉದ್ದೇಶ: ಮೈಸೂರನ್ನು ಸೈಬರ್ ಸೆಕ್ಯುರಿಟಿ ಹಬ್ ಮಾಡುವ ಪ್ರಯತ್ನ ಸಾಗುತ್ತಿದೆ. ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಸೈಬರ್ ಸೆಕ್ಯೂರಿಟಿ, ಆಧುನಿಕ ತಂತ್ರಜ್ಞಾನದ ಬಗ್ಗೆ ಯುವಕರು - ಯುವತಿಯರಿಗೆ ಕನಿಷ್ಠ ಜ್ಞಾನ ನೀಡುವುದಾಗಿದೆ. ಸೈಬರ್ ಭದ್ರತೆ ಸಂಬಂಧ ಶಿಕ್ಷಣ ಪಡೆಯಲು ವಿದೇಶಗಳಿಗೆ ಹೋಗುವುದು ತಪ್ಪಲಿದ್ದು, ಮೈಸೂರು ತಾಂತ್ರಿಕವಾಗಿ ಬೆಳೆಯಲು ಸಹಕಾರಿಯಾಗಲಿದೆ.
ಇದನ್ನೂ ಓದಿ: ಸೈಬರ್ ಅಪರಾಧ: ಜಾಗೃತಿ ಮೂಡಿಸಲು ಮೈಸೂರು ಸೈಬರ್ ಕ್ರೈಂ ನಿಂದ ವಿನೂತನ ಪ್ರಯತ್ನ
ಸೈಬರ್ ಸೆಕ್ಯುರಿಟಿ ಯೋಜನೆಯೊಂದನ್ನು ಮೂರು ವರ್ಷಗಳ ಹಿಂದೆ ರೂಪಿಸಲಾಗಿತ್ತು. ಮೈಸೂರನ್ನು ಸೈಬರ್ ಸೆಕ್ಯುರಿಟಿ ಹಬ್ ಮಾಡುವುದು, ಸ್ಥಳೀಯ ಮಟ್ಟದಲ್ಲಿಯೇ ಗುಣಮಟ್ಟದ ತರಬೇತಿ ನೀಡುವುದು, ಜಾಗತಿಕ ಬಂಡವಾಳ ಆಕರ್ಷಣೆ, ಸೈಬರ್ ವಿಚಾರದಲ್ಲಿ ತೊಂದರೆಗೆ ಒಳಗಾದವರಿಗೆ ಪ್ರಾಥಮಿಕ ಹಂತದಲ್ಲಿ ಸಹಾಯ ಮಾಡುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ತರಬೇತಿ ನೀಡುವುದಾಗಿದೆ ಎಂದು ಸಂಸ್ಥೆಯ ಸ್ವರೂಪ ಮತ್ತು ಉದ್ದೇಶದ ಬಗ್ಗೆ ಕರ್ನಾಟಕ ಡಿಜಿಟಲ್ ಎಕಾನಮಿ ಫೌಂಡೇಷನ್ನ ಕ್ಲಸ್ಟರ್ ಹೆಡ್ ಕೆ.ಎಸ್. ಸುಧೀರ್ 'ಈಟಿವಿ ಭಾರತ' ಕ್ಕೆ ಮಾಹಿತಿ ನೀಡಿದರು.
ಸೈಬರ್ ಅನಾಹುತಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ: ಭೇರುಂಡ ಫೌಂಡೇಶನ್ ಮೈರಾ ಸ್ಕೂಲ್ ಆಫ್ ಬಿಸಿನೆಸ್ನಲ್ಲಿ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಹಬ್ ಪ್ರಾರಂಭ ಮಾಡುವ ಯೋಜನೆಯೊಂದಿಗೆ ಕೈಜೋಡಿಸಿದೆ. ಸೈಬರ್ ಭದ್ರತೆ ಬಗ್ಗೆ ಆಧುನಿಕ ಯುಗದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾಗಿದ್ದು, ಕೆಲ ಸಾಫ್ಟ್ವೇರ್ ಬಳಸಿಕೊಂಡು ಗಣ್ಯರು ಮತ್ತು ಸಾಮಾನ್ಯ ಜನರ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಕೊಳ್ಳೆ ಹೊಡೆಯುವ ಕೃತ್ಯಗಳು ಹೆಚ್ಚಾಗುತ್ತಿವೆ.
ಈ ಸಂಬಂಧ ಯುವ ಪೀಳಿಗೆಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಬೇಕು. ಸೈಬರ್ ಭದ್ರತೆ ಕುರಿತು ಕೋರ್ಸ್ ರಚಿಸಿ ತರಬೇತಿ ನೀಡಬೇಕು. ಬಹಳ ಮುಖ್ಯವಾಗಿ ಸೈಬರ್ ಅನಾಹುತಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಬಿ ವೈ ರಾಘವೇಂದ್ರ ಖಾತೆಯಿಂದ 16 ಲಕ್ಷ ರೂ ಕನ್ನ : ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಸಂಸದ
ನಮ್ಮ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಉತ್ತಮ ವೇದಿಕೆ ನೀಡುವ ಉದ್ದೇಶದಿಂದ ನಾವು ಕೈಜೋಡಿಸಿದ್ದೇವೆ ಎಂದು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದ್ದಾರೆ.