ಮೈಸೂರು : ಕಾಂಗ್ರೆಸ್ ಘೋಷಿಸಿರುವ ಪ್ರಮುಖ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ನಕಲಿ ಸರ್ಟಿಫಿಕೇಟ್ ಸೃಷ್ಟಿ ಮಾಡಿ ಮಾರಾಟ ಮಾಡುತ್ತಿದ್ದ ಸೈಬರ್ ಸೆಂಟರ್ ಮಾಲೀಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಸುರೇಶ್ ಕುಮಾರ್ ಎನ್ನಲಾಗಿದ್ದು, ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮೇಟಗಳ್ಳಿಯ ಸುಧಾಮೂರ್ತಿ ರಸ್ತೆಯಲ್ಲಿರುವ ಸೈಬರ್ ಸೆಂಟರ್ನಲ್ಲಿ ಆರೋಪಿ ಸುರೇಶ್ ಕುಮಾರ್, ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಗೃಹ ಲಕ್ಷ್ಮಿ ಯೋಜನೆಯ ನಕಲಿ ಸರ್ಟಿಫಿಕೇಟ್ಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಸುಕೇಶ್ ಕುಮಾರ್ ಎಂಬುವವರು ಮೇಟಗಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದರು. ಈ ಸಂಬಂಧ ಎಸಿಪಿ ಗಜೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ಸಂದರ್ಭದಲ್ಲಿ ಸರ್ಕಾರಿ ಯೋಜನೆಗೆ ಸಂಬಂಧಿಸಿದ ಹಲವು ನಕಲಿ ದಾಖಲಾತಿಗಳು ಸಿಕ್ಕಿದ್ದು, ಹೀಗಾಗಿ ಸೈಬರ್ ಸೆಂಟರ್ಗೆ ಬೀಗ ಜಡಿದ ಪೊಲೀಸರು ಮಾಲೀಕ ಸುರೇಶ್ ಕುಮಾರ್ ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಕಮಿಷನರ್ ಪ್ರತಿಕ್ರಿಯೆ : ಇನ್ನು ಈ ಪ್ರಕರಣ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರು, ನಕಲಿ ಸರ್ಟಿಫಿಕೇಟ್ ಮರಾಟ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸೈಬರ್ ಸೆಂಟರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲಿ ನಕಲಿ ದಾಖಲಾತಿಗಳು ಪತ್ತೆಯಾಗಿದ್ದು, ಬಳಿಕ ಸೈಬರ್ ಸೆಂಟರ್ ಮಾಲೀಕನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ಈ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಯಾರಾದರೂ ನಕಲಿ ದಾಖಲೆಗಳನ್ನು ಮಾಡುತ್ತಿದ್ದರೆ ಅಥವಾ ಹೆಚ್ಚಿಗೆ ಹಣ ಪಡೆಯುತ್ತಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಲೇಡಿ ಅಸಿಸ್ಟೆಂಟ್ ಪ್ರೊಫೆಸರ್ ಎಸ್ಕೇಪ್ : ಮೈಸೂರು ನಗರದ ಬನ್ನೂರು ರಸ್ತೆಯಲ್ಲಿ ಇರುವ ಪ್ರತಿಷ್ಠಿತ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಸುಮಾರು 25 ಲಕ್ಷ ರೂ. ಶುಲ್ಕ ವಸೂಲಿ ಮಾಡಿ ಅದನ್ನು ಆಡಳಿತ ಮಂಡಳಿಗೆ ನೀಡದೇ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ಪರಾರಿಯಾಗಿರುವ ಆರೋಪದಡಿ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಿನ್ನೆ ದಾಖಲಾಗಿದೆ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹರ್ಷಿತಾ ಪರಾರಿಯಾದವರು.
ಶುಲ್ಕದ ಹಣ ನೀಡದ ಪರಿಣಾಮ ಆಡಳಿತ ಮಂಡಳಿಯವರು ಶುಲ್ಕ ಪಾವತಿಸುವವರೆಗೂ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಅಸಿಸ್ಟೆಂಟ್ ಪ್ರೊಫೆಸರ್ ವಿರುದ್ಧ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸಹ ಆಕೆಯ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, ಆರೋಪಿ ಮಹಿಳಾ ಅಸಿಸ್ಟೆಂಟ್ ಪ್ರೊಫೆಸರ್ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಕಾಲೇಜು ಕ್ಯಾಂಪಸ್‌ನಲ್ಲಿಯೂ ಸಹ ಹೆಲ್ಮೆಟ್ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ